ಬೆಂಗಳೂರು(Bengaluru): ತೂಕ, ಅಳತೆಯಲ್ಲಿ ವ್ಯತ್ಯಾಸದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಸ್ತು ಸ್ಥಿತಿ ಪರಿಶೀಲನೆ ನಡೆಸಲು ರಾಜ್ಯದ ಹಲವು ಜಿಲ್ಲೆಗಳ 21 ಸಕ್ಕರೆ ಕಾರ್ಖಾನೆಗಳ ಮೇಲೆ ಸಕ್ಕರೆ ಇಲಾಖಾ ಆಯುಕ್ತರ ನೇತೃತ್ವದಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆದಿದೆ.
ತೂಕ ಮತ್ತು ಅಳತೆಯ ವ್ಯತ್ಯಾಸ ಪತ್ತೆ ಹಚ್ಚಲು ಸಕ್ಕರೆ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿದ್ದು, ಈ ರೀತಿಯ ದಾಳಿ ಸಕ್ಕರೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಬುಧವಾರ ಮುಂಜಾನೆ 7 ಗಂಟೆಗೆ ಸರಿಯಾಗಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವ್ಯತ್ಯಾಸ ಕಂಡುಬಂದಿದ್ದು ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿಯುತ್ತಿದೆ.
ಈ ಸಾಲಿನ ಕಬ್ಬು ಕಟಾವು ಹಂಗಾಮು ಮುಗಿಯುವವರೆಗೂ ನಿರಂತರವಾಗಿ ಗೌಪ್ಯತೆಯ ಮೂಲಕ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲು ಸಕ್ಕರೆ ಇಲಾಖೆಯಿಂದ ತೀರ್ಮಾನ ಮಾಡಲಾಗಿತ್ತು.
ಹಲವು ರೈತ ಸಂಘಟನೆಗಳು ತೂಕದಲ್ಲಿ ವ್ಯತ್ಯಾಸ ಕಂಡುಬರುವ ಕುರಿತು ತನಿಖೆ ನಡೆಸುವಂತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಇವರ ಬಳಿ ಒತ್ತಾಯಿಸಿದ್ದರು. ಈ ಬಗ್ಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಏಕಕಾಲಕ್ಕೆ ದಾಳಿ ನಡೆದಿದೆ.
ಬೆಳಗಾವಿ -8, ಬಿಜಾಪುರ – 4, ಬಾಗಲಕೋಟೆ – 4, ಬೀದರ್ – 2, ಗುಲಬರ್ಗ – 2, ಕಾರವಾರ – 1 ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ.
ಸಕ್ಕರೆ ಇಲಾಖೆಯ ಆಯುಕ್ತರಾದ ಶಿವಾನಂದ್ ಹೆಚ್. ಕಲಕೇರಿ ಇವರ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು, ದಾಳಿಯಲ್ಲಿ ಸಕ್ಕರೆ ಇಲಾಖೆಯ ಅಧಿಕಾರಿಗಳು, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದರು.