ಮನೆ ಕ್ರೀಡೆ ಪಾದಾರ್ಪಣೆ ಪಂದ್ಯದಲ್ಲಿಯೇ ಶತಕ ಸಿಡಿಸಿ ತಂದೆ ದಾಖಲೆ  ಸರಿಗಟ್ಟಿದ ಅರ್ಜುನ್ ತೆಂಡೂಲ್ಕರ್

ಪಾದಾರ್ಪಣೆ ಪಂದ್ಯದಲ್ಲಿಯೇ ಶತಕ ಸಿಡಿಸಿ ತಂದೆ ದಾಖಲೆ  ಸರಿಗಟ್ಟಿದ ಅರ್ಜುನ್ ತೆಂಡೂಲ್ಕರ್

0

ಗೋವಾ(Goa): ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿಯೇ ಚೊಚ್ಚಲ ಶತಕ ಸಿಡಿಸುವ ಮೂಲಕ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅರ್ಜುನ್ ತೆಂಡೂಲ್ಕರ್ ಬುಧವಾರ ಸರಿಗಟ್ಟಿದ್ದಾರೆ.

ಇಲ್ಲಿನ ಗೋವಾ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮಂಗಳವಾರ ಆರಂಭವಾಗಿದ್ದ ಎಲೈಟ್ ‘ಸಿ’ ರಾಜಸ್ಥಾನ ವಿರುದ್ದದ ಪಂದ್ಯದ ಎರಡನೇ ದಿನ ಅರ್ಜುನ್ ತೆಂಡೂಲ್ಕರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಎರಡನೇ ದಿನದಾಟದ ಅಂತ್ಯಕ್ಕೆ ಅರ್ಜುನ್  ತೆಂಡೂಲ್ಕರ್ 195 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ 15 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 112 ರನ್ ಗಳಿಸಿದರು.

ಶತಕದ ಜೊತೆಗೆ ಏಳನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕ್ರೀಸ್’ಗೆ ಬಂದಿದ್ದ ಅರ್ಜುನ್ ತೆಂಡೂಲ್ಕರ್ ಶತಕ ಸಿಡಿಸುವ ಜೊತೆಗೆ ಸುಯೇಷ್ ಪ್ರಭುದೇಸಾಯಿ ಅವರ ಜೊತೆ 200ಕ್ಕೂ ಹೆಚ್ಚಿನ ರನ್’ಗಳ ಜೊತೆಯಾಟವನ್ನು ಆಡಿದರು. ಇದರೊಂದಿಗೆ ತಮ್ಮ ತಂದೆಯ ದಾಖಲೆಯನ್ನು ಸರಿಗಟ್ಟಿದರು.

ಸಚಿನ್ ತೆಂಡೂಲ್ಕರ್ 1988ರ ಡಿಸೆಂಬರ್ ತಿಂಗಳಲ್ಲಿ ಗುಜರಾತ್ ವಿರುದ್ಧ ರಣಜಿ ಟ್ರೋಫಿ ಪಾದಾರ್ಪಣೆ ಮಾಡಿದ್ದರು. ಈ ಪಾದಾರ್ಪಣೆ ಪಂದ್ಯದಲ್ಲಿಯೇ ಸಚಿನ್ 129 ಎಸೆತಗಳಲ್ಲಿ 12 ಬೌಂಡರಿಗಳ ಮೂಲಕ ಅಜೇಯ ಶತಕ ಸಿಡಿಸಿದ್ದರು. ಆ ಮೂಲಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್’ಮನ್ ಎಂಬ ಕೀರ್ತಿಗೆ ಸಚಿನ್ ತೆಂಡೂಲ್ಕರ್ ಅಂದು ಭಾಜನರಾಗಿದ್ದರು.

ಅರ್ಜುನ್ ತೆಂಡೂಲ್ಕರ್ ಕೂಡ ಮುಂಬೈ ಪರ ರಣಜಿ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವರಿಗೆ ಅವಕಾಶ ದೊರೆಯದ ಕಾರಣ ಈ ವರ್ಷ ಗೋವಾ ತಂಡಕ್ಕೆ ಸೇರ್ಪಡೆಯಾಗಿದ್ದರು. ಅದರಂತೆ ಮೊದಲನೇ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇದಕ್ಕೂ ಮುನ್ನ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಗೋವಾ ತಂಡದ ಪರ ಆಡಿದ್ದರು. ಈ ಎರಡೂ ಟೂರ್ನಿಗಳಲ್ಲಿ ಕ್ರಮವಾಗಿ 8 ಹಾಗೂ 10 ವಿಕೆಟ್’ಗಳನ್ನು ಕಬಳಿಸಿದ್ದರು.

ಎರಡನೇ ದಿನದಾಟದ ಅಂತ್ಯಕ್ಕೆ ಗೋವಾ ಪ್ರಥಮ ಇನಿಂಗ್ಸ್’ನಲ್ಲಿ 140 ಓವರ್’ಗಳಿಗೆ 6 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದೆ. ಅರ್ಜುನ್ ತೆಂಡೂಲ್ಕರ್ ಜೊತೆಗೆ ಮತ್ತೊಂದು ತುದಿಯಲ್ಲಿ ಅಜೇಯರಾಗಿ ಉಳಿದಿರುವ ಪ್ರಭು ದೇಸಾಯಿ 357 ಎಸೆತಗಳಲ್ಲಿ 172 ರನ್ ಗಳಿಸಿದ್ದಾರೆ. ಆ ಮೂಲಕ ಮೂರನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.