ಮನೆ ಸುದ್ದಿ ಜಾಲ ನಕಲಿ ವೈದ್ಯರು, ಕ್ಲಿನಿಕ್’ಗಳ ಮಾಹಿತಿ ಕೊಡಿ: ಆಯುಷ್ ಇಲಾಖೆಗೆ ಆರೋಗ್ಯ ಇಲಾಖೆ ಪತ್ರ

ನಕಲಿ ವೈದ್ಯರು, ಕ್ಲಿನಿಕ್’ಗಳ ಮಾಹಿತಿ ಕೊಡಿ: ಆಯುಷ್ ಇಲಾಖೆಗೆ ಆರೋಗ್ಯ ಇಲಾಖೆ ಪತ್ರ

0

ಬೆಂಗಳೂರು(Bengaluru): ಕರ್ನಾಟಕ ಆಯುರ್ವೇದಿಕ್ ಮತ್ತು ಯನಾನಿ ವೈದ್ಯ ಮಂಡಳಿಯ (ಕೆಎಯುಪಿಬಿ) ನಕಲಿ ನೋಂದಣಿ ಪ್ರಮಾಣ ಪತ್ರವನ್ನು ಬಳಸಿಕೊಂಡು ಹಾಗೂ ಮೃತ ವೈದ್ಯರ ಪ್ರಮಾಣ ಪತ್ರ ಬಳಸಿಕೊಂಡು ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಖಾಸಗಿ ಆಯುಷ್ ವೈದ್ಯರ ಕುರಿತು ಮಾಹಿತಿಯನ್ನು ತಕ್ಷಣ ಒದಗಿಸುವಂತೆ ಆಯುಷ್ ಇಲಾಖೆಗೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಕೆಎಯುಪಿಬಿ ಮಂಡಳಿಯಲ್ಲಿ ನಕಲಿ ಪ್ರಮಾಣ ಪತ್ರ ನೀಡಿರುವ ನೋಂದಣಿ ಪ್ರಮಾಣ ಪತ್ರಗಳ ಪಟ್ಟಿ ಮತ್ತು ಅಗತ್ಯ ಸಂಪೂರ್ಣ ಮಾಹಿತಿ ಆಯುಕ್ತಾಲಯಕ್ಕೆ ಕಳುಹಿಸಬೇಕು. ಜನ ಸಾಮಾನ್ಯರಿಗೆ ಆರೋಗ್ಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಇಂಥ ವೈದ್ಯಕೀಯ ಪ್ರಮಾಣ ಪತ್ರ ಬಳಸಿಕೊಂಡು ತೆರೆದಿರುವ ಖಾಸಗಿ ಕ್ಲಿನಿಕ್’ಗಳನ್ನು ರದ್ದುಗೊಳಿಸುವುದು ಹಾಗೂ ಇತರೆ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಅತಿ ಜರೂರಾಗಿ ಮಾಹಿತಿ ನೀಡಬೇಕೆಂದು ಪತ್ರದಲ್ಲಿ ಆರೋಗ್ಯ ಇಲಾಖೆ ಉಲ್ಲೇಖಿಸಿದೆ.

ಮಂಡಳಿಯಲ್ಲಿ ಒಮ್ಮೆ ನೋಂದಣಿಯಾದ ವೈದ್ಯರು ನಿಧನರಾದರೆ, ಹೊರ ರಾಜ್ಯಕ್ಕೆ ಅಥವಾ ವಿದೇಶಗಳಿಗೆ ತೆರಳಿದರೆ ಅವರ ನೋಂದಣಿ ರದ್ದಾಗುತ್ತದೆ. ರದ್ದಾದ ಸಂಖ್ಯೆಯನ್ನು ಬೇರೆಯವರಿಗೆ ನೀಡುವುದಕ್ಕೆ ಅವಕಾಶವಿಲ್ಲ. ಆದರೆ, ಈ ನೋಂದಣಿ ಸಂಖ್ಯೆ ಬಳಸಿಕೊಂಡು ಮಂಡಳಿಯಲ್ಲಿ 1998-99, 2000-01, 2009-10, 2018ರ ಆಗಸ್ಟ್’ನಿಂದ 2020ರ ಸೆಪ್ಟಂಬರ್’ವರೆಗಿನ  ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಿಜಿಸ್ಟಾರ್’ಗಳು, ವೈದ್ಯ ವೃತ್ತಿ ನಡೆಸಲು ಅರ್ಹತೆ ಹೊಂದಿಲ್ಲದ 7 ರಿಂದ 8 ಸಾವು ಮಂದಿ ನಕಲಿ ವೈದ್ಯರಿಗೆ ನಕಲಿ ನೋಂದಣಿ ಪ್ರಮಾಣ ಪತ್ರ ಕೊಟ್ಟಿರುವ ಬಗ್ಗೆ ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿದೆ. ಇಂಥ ನಕಲಿ ಪ್ರಮಾಣ ಪತ್ರದಲ್ಲಿ ಹೆಸರು ನಮೂದಿಸಿ ಭಾವಚಿತ್ರ ಅಂಟಿಸಿಕೊಂಡು ಖಾಸಗಿ ಆಯುಷ್ ವೈದ್ಯರುಗಳು ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಅಡಿ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ತೆರೆಯಲು ಪರವಾನಗಿ ಪಡೆದಿದ್ದಾರೆ. ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರುಗಳಿಂದ ಚಿಕಿತ್ಸೆ ಪಡೆದಿರುವ ರೋಗಿಗಳು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.

ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಖಾಸಗಿ ಆಯುಷ್ ವೈದ್ಯರುಗಳ ಮಾಹಿತಿ ನೀಡುವಂತೆ ಆಯುಷ್ ಗೆ ಆರೋಗ್ಯ ವಿಲಾಖೆ ಸೂಚಿಸಿದೆ.

ಪಟ್ಟಿ ಸಲ್ಲಿಸದ ಕೆಎಯುಪಿಬಿ

ಸಾವಿರಾರು ನಕಲಿ ಪ್ರಮಾಣ ಪತ್ರ ಪ್ರಕರಣದ ಸಂಬಂಧ ಅಮಾನತು ಆಗಿರುವ ಕೆಎಯುಪಿಬಿ ರಿಜಿಸ್ಟ್ರಾರ್ ಆಗಿದ್ದ ಡಾ.ವೆಂಕಟರಾಮಯ್ಯ ವಿರುದ್ಧ ಕೆಎಯುಪಿಬಿ ದೋಷಾರೋಪಣೆ ಪಟ್ಟಿಯನ್ನು ತಯಾರಿಸಿಲ್ಲ. ಪಟ್ಟಿಯನ್ನು ಸಿದ್ಧಪಡಿಸಿ ಆಯುಷ್ ಇಲಾಖೆಗೆ ಕೆಎಯುಪಿಬಿ ಸಲ್ಲಿಸಬೇಕಿತ್ತು. ಆದರೆ ಭ್ರಷ್ಟ ವೆಂಕಟರಾಮಯ್ಯ ರಕ್ಷಿಸಲು ಕೆಲ ಅಧಿಕಾರಿಗಳು  ಬೇಕಂತಲೇ ಪಟ್ಟಿ ತಯಾರಿಕೆಗೆ ವಿಳಂಬ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.