ಮನೆ ರಾಜಕೀಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಎ.ಎಚ್.ವಿಶ್ವನಾಥ್

ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಎ.ಎಚ್.ವಿಶ್ವನಾಥ್

0

ಮೈಸೂರು(Mysuru): ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ತಿರುಗೇಟು ನೀಡಿದ್ದಾರೆ.


ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನನ್ನನ್ನು ಅಲೆಮಾರಿ ಎಂದೆಲ್ಲಾ ಪ್ರಸಾದ್ ಈಚೆಗೆ ಟೀಕಿಸಿದ್ದಾರೆ. ಸ್ವಾರ್ಥಕ್ಕಾಗಿ ಸ್ನೇಹವನ್ನು ಮರೆತು ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಐವತ್ತು ವರ್ಷಗಳ ಸ್ನೇಹ ನಮ್ಮದು. ನೀವು ಎಲ್ಲೆಲ್ಲಿದ್ರಿ ಪ್ರಸಾದ್? ಆರ್’ಎಸ್’ಎಸ್ ಕಾರ್ಯಕರ್ತರಾಗಿದ್ದವರು ನೀವು. ನಿಜಲಿಂಗಪ್ಪ ಅವರ ಸಂಸ್ಥಾ ಕಾಂಗ್ರೆಸ್ ಸೇರಿದಿರಿ. ಜನತಾ ಪಾರ್ಟಿ, ಕಾಂಗ್ರೆಸ್, ಸಮತಾ ಪಾರ್ಟಿ, ಜೆಡಿಯು, ಜೆಡಿಎಸ್’ಗೆ ಹೋಗಿ ಬಂದಿದ್ದೀರಿ. ಮತ್ತೆ ಕಾಂಗ್ರೆಸ್ ಸೇರಿದಿರಿ. ಈಗ ಬಿಜೆಪಿಯಲ್ಲಿದ್ದೀರಿ. ನೀವು ನನ್ನನ್ನು ಅಲೆಮಾರಿ ಎನ್ನುತ್ತೀರಲ್ಲಾ? ಎಂದು ಪ್ರಶ್ನಿಸಿದರು.
ನೀವು ದಿಢೀರನೆ ನನ್ನ ಮೇಲೆ ಮುಗಿಬಿದ್ದಿರುವ ಹಿನ್ನೆಲೆ ಏನು? ಯಾರನ್ನು ಮೆಚ್ಚಿಸಲು, ಏನನ್ನು ಪಡೆದುಕೊಳ್ಳಲು ಹೊರಟಿದ್ದೀರಿ? ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳುಬರುತ್ತಿರುವಾಗ, ನನ್ನನ್ನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ ಯಾರನ್ನೋ ಮೆಚ್ಚಿಸಿ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ್’ಗೆ ಸಚಿವ ಸ್ಥಾನ ಕೊಡಿಸುವ ಸ್ವಾರ್ಥ ನಿಮ್ಮದು. ಇನ್ನೊಬ್ಬ ಅಳಿಯನನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ನಿಲ್ಲಿಸಬೇಕು, ಮಗಳನ್ನು ತಿ.ನರಸೀಪುರಕ್ಕೆ ತರಲೆಂದು ಮಾತನಾಡುತ್ತಿದ್ದೀರಿ ಎಂದು ಟೀಕಿಸಿದರು.
ನಾನು ಜೆಡಿಎಸ್’ನಲ್ಲಿದ್ದೆ. ನನ್ನನ್ನು ಬಿಜೆಪಿಗೆ ಕರೆತಂದಿದ್ದನ್ನು ಮರೆತಿರಾ? ಸ್ನೇಹಕ್ಕೆ ಬಲಿಯಾದವರ ಬಗ್ಗೆ ಹಗುರವಾಗಿ ಮಾತನಾಡುವ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ಕಾಂಗ್ರೆಸ್’ನವರನ್ನು ನಾನು ಮಾತಾಡಿಸಿದ್ದೇ ತಪ್ಪಾ? ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿ. ಮುತ್ಸದ್ದಿ. ನಿರ್ವಹಿಸಿದ ಖಾತೆಗೆಲ್ಲಾ ಜೀವ ತುಂಬಿದವರು. ಅವರ ಬಗ್ಗೆ ಲಘುವಾಗಿ ಮಾತಾನಾಡುವುದು ಸರಿಯಲ್ಲ. ರಾಜಕಾರಣದಲ್ಲಿ ಆರೋಪ- ಪ್ರತ್ಯಾರೋಪ ಸಹಜ. ಆದರೆ, ಬೇರೆ ಪಕ್ಷದವರನ್ನು ಭೇಟಿಯಾಗುವುದು ಘೋರ ಅಪರಾಧವೇ? ನನ್ನ ಬಾವುಟ ಬದಲಾಗಿರಬಹುದು; ಕಾರ್ಯಸೂಚಿ ಬದಲಾಗಿಲ್ಲ. ಕಾಂಗ್ರೆಸ್ ನನ್ನ ತಾಯಿ ಎಂದೇ ಹಿಂದೆಯೂ ಹೇಳಿದ್ದೇನೆ; ಮುಂದೆಯೂ ಹೇಳುತ್ತೇನೆ. 40 ವರ್ಷ ಸಾಕಿದ ಪಕ್ಷವದು. ಜೆಡಿಎಸ್ ಜಾತ್ಯತೀತ ಮನೋಭಾವ ಬೆಳೆಸಿದೆ. ಬಿಜೆಪಿಗೆ ಬಂದ ಮೇಲೂ ನನ್ನ ತತ್ವ- ಸಿದ್ಧಾಂತವನ್ನು ಬಿಟ್ಟಿಲ್ಲ ಎಂದರು.
ಬಿಜೆಪಿಯಲ್ಲಿ ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಹೊರಗಿನಿಂದ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ಒಳ ಹೋದಾಗಲೇ ಅಲ್ಲಿ ಏನೇನಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಪ್ರತಿಕ್ರಿಯಿಸಿದರು.