ಶಿರಸಿ(Shirsi): ಕಾಂಗ್ರೆಸ್ ಜಾರಿಗೆ ತಂದಿದ್ದ ಉಳುವವನೆ ಭೂಮಿ ಒಡೆಯ ಯೋಜನೆಗೆ ವಿರುದ್ಧವಾಗಿ ಉಳ್ಳವರಿಗೆ ಭೂಮಿ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಅರಣ್ಯ ಅತಿಕ್ರಮಣ ವಿಷಯದ ಚರ್ಚೆ ನಡೆಸಲಾಗುವುದು. ಕಾಂಗ್ರೆಸ್ ಜನರಿಗೆ ಹಕ್ಕು ನೀಡುವ ಕೆಲಸ ಮಾಡಿದ್ದರೆ, ಬಿಜೆಪಿ ಅದನ್ನು ಕಸಿಯುವ ಕೆಲಸಕ್ಕೆ ಕೈಹಾಕಿದೆ ಎಂದರು.
ಉತ್ತರ ಕನ್ನಡವೂ ಸೇರಿದಂತೆ ರಾಜ್ಯದ ವಿವಿಧೆಡೆ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಜನರ ಹಕ್ಕನ್ನು ಕಸಿಯುವ ಯತ್ನದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದರು.
ಬೆಳಗಾವಿ ಗಡಿ ವಿವಾದ ವಿಚಾರದಲ್ಲಿ ಸರ್ವ ಪಕ್ಷದ ಸಭೆ ಕರೆಯಬೇಕಿತ್ತು. ಕೇವಲ ಸಚಿವರು ಮುಖ್ಯಮಂತ್ರಿ ಜತೆ ಚರ್ಚಿಸಿದರೆ ಸಾಲದು. ರಾಜಕೀಯ ಉದ್ದೇಶಕ್ಕೆ ವಿವಾದ ಸೃಷ್ಟಿಸಿದಂತೆ ಕಾಣುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಉಗ್ರ ಚಟುವಟಿಕೆಯನ್ನು ಬೆಂಬಲಿಸಿಲ್ಲ:
ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಿರುವ ಪಕ್ಷ. ಉಗ್ರ ಚಟುವಟಿಕೆ ಎಂದಿಗೂ ಬೆಂಬಲಿಸಿಲ್ಲ ಎಂದು ಹೇಳಿದರು.
ದೇಶದ್ರೋಹಿಗಳ ವಿರುದ್ಧ ಹೋರಾಡಿದ್ದಕ್ಕೆ ಮಹಾತ್ಮ ಗಾಂಧೀಜಿ ಅವರನ್ನು ಕಳೆದುಕೊಂಡೆವು. ಭಯೋತ್ಪಾದನೆ ವಿರುದ್ದ ಹೋರಾಡಿದ್ದಕ್ಕಾಗಿಯೇ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಜೀವ ತೆತ್ತಿದ್ದಾರೆ. ಆದರೂ ಕಾಂಗ್ರೆಸ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಇಲ್ಲಿ ಮಾತನಾಡಿದರು.
ಪ್ರಮುಖರಾದ ರವೀಂದ್ರ ನಾಯ್ಕ, ಎಸ್.ಕೆ.ಭಾಗವತ, ಮಂಜುನಾಥ ನಾಯ್ಕ, ಪುಷ್ಪಾ ನಾಯ್ಕ ಇದ್ದರು.