ರಾಮನಗರ(Ramanagara): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಪಂಚರತ್ನ ರಥಯಾತ್ರೆ ಸಂದರ್ಭ ಮಾತನಾಡಿದ ಅವರು, ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರು. ಇದಕ್ಕೆಲ್ಲ ತೆರೆ ಎಳೆಯಬೇಕು ಎಂದೇ ಇಂದು ಈ ಘೋಷಣೆ ಮಾಡಿದ್ದೇನೆ. 2023ರ ಚುನಾವಣೆಯಲ್ಲಿ ನನ್ನ ಮಗನನ್ನು ಈ ಕ್ಷೇತ್ರದಿಂದ ಅಭ್ಯರ್ಥಿಯಾಗಿಸಲು ತೀರ್ಮಾನಿಸಿದ್ದೇವೆ. ನಮ್ಮ ಕುಟುಂಬಕ್ಕೆ ಆಶೀರ್ವಾದ ನೀಡಿದಂತೆ ಅವನನ್ನೂ ಬೆಂಬಲಿಸಬೇಕು ಎಂದು ಕೋರಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಈ ಸಂದರ್ಭ ಜೊತೆಗಿದ್ದರು.
ಮತ್ತೊಂದು ಕುಡಿ: ರಾಮನಗರ ವಿಧಾನಸಭಾ ಕ್ಷೇತ್ರದಿಂದ ಎಚ್.ಡಿ. ದೇವೇಗೌಡರ ಕುಟುಂಬದ ಕುಡಿ ಕಣಕ್ಕೆ ಇಳಿಯುವುದು ಖಾತ್ರಿಯಾಗಿದೆ. 1994ರಲ್ಲಿ ಎಚ್.ಡಿ. ದೇವೇಗೌಡರು ಇಲ್ಲಿಂದ ಸ್ಪರ್ಧಿಸಿ ಗೆದ್ದು ನಂತರದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ನಂತರದಲ್ಲಿ ಎಚ್.ಡಿ. ಕುಮಾರಸ್ವಾಮಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರದಲ್ಲೂ ಸ್ಪರ್ಧಿಸಿ ಗೆದ್ದ ಬಳಿಕ ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಆಯ್ಕೆ ಆಗಿದ್ದರು.