ಮನೆ ರಾಜ್ಯ ವಿಧಾನಸಭೆಯಲ್ಲಿ ಸಾವರ್ಕರ್ ಫೋಟೊ: ಸ್ಪೀಕರ್ ನಿರ್ಧಾರ ಎಂದ ಸಿಎಂ ಬೊಮ್ಮಾಯಿ

ವಿಧಾನಸಭೆಯಲ್ಲಿ ಸಾವರ್ಕರ್ ಫೋಟೊ: ಸ್ಪೀಕರ್ ನಿರ್ಧಾರ ಎಂದ ಸಿಎಂ ಬೊಮ್ಮಾಯಿ

0

ಬೆಳಗಾವಿ(Belagavi): ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಸಾವರ್ಕರ್‌ ಸೇರಿ ಏಳು ಮಹನೀಯರ ಭಾವಚಿತ್ರ ಹಾಕುವ ವಿಚಾರ ಸ್ಪೀಕರ್‌’ಗೆ ಬಿಟ್ಟಿದ್ದು, ಅದು ಅವರ ನಿರ್ಧಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೋಮವಾರ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕೆಲವರ ಭಾವಚಿತ್ರ ಹಾಕಿದ ಬಗ್ಗೆ ಕಾಂಗ್ರೆಸ್‌ ಎತ್ತಿದ ಅ‍ಪಸ್ವರ ಹಾಗೂ ಇನ್ನೂ ಹಲವು ಮಹಾತ್ಮರ ಭಾವಚಿತ್ರ ಅಳವಡಿಸುವಂತೆ ಪತ್ರ ಬರೆದ ವಿಚಾರಗಳೂ ನನಗೆ ತಿಳಿದಿಲ್ಲ. ಈ ಬಗ್ಗೆ ಸ್ಪೀಕರ್‌ ಹಾಗೂ ವಿರೋಧ ಪಕ್ಷದವರೊಂದಿಗೆ ನಾನೇ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉತ್ತರ ಕರ್ನಾಟಕದ ಸಮಸ್ಯೆಗಳು ಸಮಗ್ರವಾಗಿ ಚರ್ಚೆ ಆಗಬೇಕು. ಒಳ್ಳೆಯ ಕಾನೂನುಗಳು ರಚನೆಯಾಗಬೇಕು ಎಂಬ ಉದ್ದೇಶ ನಮಗಿದೆ. ಗಡಿ, ನೆಲ, ಜಲ ವಿವಾದಗಳು ಸೇರಿದಂತೆ ಎಲ್ಲ ವಿಷಯಗಳೂ ಸಮಗ್ರವಾಗಿ ಚರ್ಚೆ ಆಗಲಿವೆ ಎಂದರು.

ಕೆ.ಎಸ್.ಈಶ್ವರಪ್ಪ ಕುರಿತ ಪ್ರಶ್ನೆಗೆ ಸಿಎಂ ಕೆಂಡಾಮಂಡಲ:

ಮಾಜಿ ಸಚಿವ ಈಶ್ವರಪ್ಪರಿಂದ ಸದನ ಬಹಿಷ್ಕಾರ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಂಡಾಮಂಡಲಗೊಂಡರು.

ನೀವು ಅದನ್ನೆಲ್ಲ ಸೃಷ್ಟಿ ಮಾಡಿಕೊಂಡು ಹೇಳಬೇಡಿ. ನಾನು ಈಶ್ವರಪ್ಪ ಜೊತೆ ಮಾತಾಡುತ್ತೇನೆಂದು ಹೇಳಿದರು.