ಮನೆ ಕಾನೂನು ಮೈಸೂರು: ಜೀವಾವಧಿ ಶಿಕ್ಷೆಗೊಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಬಿಡುಗಡೆ

ಮೈಸೂರು: ಜೀವಾವಧಿ ಶಿಕ್ಷೆಗೊಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಬಿಡುಗಡೆ

0

ಮೈಸೂರು(Mysuru): ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಅವರು, ಜಾಮೀನಿನ ಮೇಲೆ ಮಂಗಳವಾರ ಬೆಳಿಗ್ಗೆ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು.

ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಸುಪ್ರೀಂ ಕೋರ್ಟ್ ಮಾನವೀಯತೆ ಆಧಾರದ ಮೇಲೆ ನ.26ರಂದು ಜಾಮೀನು ಮಂಜೂರು ಮಾಡಿತ್ತು. ಸುಪ್ರೀಂ ಆದೇಶದನ್ವಯ ವಕೀಲ ಬಾಬುರಾಜ್ ಅವರು ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಜ್ಞಾನ ಪ್ರಕಾಶ್ ಬಿಡುಗಡೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಸೋಮವಾರ ಇಬ್ಬರಿಂದ ಶ್ಯೂರಿಟಿ ಹಾಗೂ ₹ 5 ಲಕ್ಷದ ಬಾಂಡ್ ಅನ್ನು ನ್ಯಾಯಾಲಯವು ಪಡೆದಿತ್ತು. ನಂತರ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಟ್ ಅವರಿಗೆ ಜ್ಞಾನ ಪ್ರಕಾಶ್ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.

ವೀರಪ್ಪನ್ ಸಹಚರ ಜ್ಞಾನಪ್ರಕಾಶ್

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಂದನಪಾಳ್ಯದ ಜ್ಞಾನಪ್ರಕಾಶ್, 1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಭಾಗಿಯಾಗಿದ್ದರು ಎಂದು ಟಾಡಾ ಕಾಯ್ದೆಯಡಿ ಮೈಸೂರಿನ ಟಾಡಾ ನ್ಯಾಯಾಲಯವು 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.

2014ರಲ್ಲಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯಿಂದ ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತು. ವೀರಪ್ಪನ್ 2004ರ ಅ.18ರಂದು ಎನ್ ಕೌಂಟರ್ ನಲ್ಲಿ ಮೃತಪಟ್ಟರೆ, ಜೈಲಿನಲ್ಲಿ ಶಿಕ್ಷೆ‌ ಅನಭವಿಸುತ್ತಿದ್ದ ಸೈಮನ್, ಬಿಲವೇಂದ್ರನ್ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್ ಮಾತ್ರ ಇದ್ದಾರೆ.

 ಕಳೆದ 29 ವರ್ಷಗಳಿಂದ ಬೆಳಗಾವಿಯ ಹಿಂಡಲಗ ಹಾಗೂ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ 68ವರ್ಷದ ಜ್ಞಾನ ಪ್ರಕಾಶ್, ಒಂದೂವರೆ ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರಿಗೆ ಬೆಂಗಳೂರಿನ ಕಿದ್ವಾಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಕೀಲರಾದ ವಿಕ್ರಂ ಹಾಗೂ ಭಾರತಿ ಅವರು, ಸುಪ್ರೀಂ ಕೋರ್ಟ್ ನಲ್ಲಿ ಜ್ಞಾನ ಪ್ರಕಾಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಬಿಡುಗಡೆಗೆ ಪುರಸ್ಕರಿಸಿದೆ.

ಜೈಲಿನಿಂದ ತಮ್ಮ ವಸ್ತುಗಳು ಹಾಗೂ ಹಲಸಿನ ಸಸಿಯೊಂದಿಗೆ ಆಚೆ ಬಂದ ಜ್ಞಾನಪ್ರಕಾಶ್ ಅವರನ್ನು ನೋಡಿದ ಸೋದರರಾದ ಆಂಥೋಣಿ, ಥಾಮಸ್ ಸೇರಿದಂತೆ ಸಂಬಂಧಿಗಳು ಭಾವುಕರಾದರು.

ಕರ್ನಾಟಕ ತಮಿಳರ್ ಕಳಂ ಪ್ರಧಾನ ಕಾರ್ಯದರ್ಶಿ ಅರ್ಪುದರಾಜ್, ಮಾರ್ಟಳ್ಳಿ ಸಂದನಪಾಳ್ಯದ ಮದಲೆ ಸ್ವಾಮಿ, ಅನ್ಬುರಾಜ್, ವಕೀಲ‌ ಬಾಬುರಾಜ್ ಇದ್ದರು.