ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ನವೆಂಬರ್ 9, 2022 ರಂದು ಅಧಿಕಾರವಹಿಸಿಕೊಂಡ ನಂತರ ಇಲ್ಲಿಯವರೆಗೆ ಸರ್ವೋಚ್ಚ ನ್ಯಾಯಾಲಯ 6,844 ಪ್ರಕರಣಗಳನ್ನು ವಿಲೇವಾರಿ ಮಾಡಿದೆ.
ನವೆಂಬರ್ 9ರಿಂದ ಚಳಿಗಾಲದ ರಜೆಯ ಆರಂಭಕ್ಕೂ ಮುನ್ನ ಈ ವರ್ಷದ ಕೊನೆಯ ಕೆಲಸದ ದಿನವಾದ ಡಿಸೆಂಬರ್ 16ರ ವರೆಗೆ 5,898 ಪ್ರಕರಣಗಳು ಸುಪ್ರೀಂ ಕೋರ್ಟ್’ನಲ್ಲಿ ದಾಖಲಾಗಿವೆ. ಈ ಅವಧಿಯಲ್ಲಿ ಒಟ್ಟು 2,511 ವರ್ಗಾವಣೆ ಮತ್ತು ಜಾಮೀನು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಡಿಸೆಂಬರ್ 12 ರಂದು ಒಟ್ಟು 384 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಇದು ಸಿಜೆಐ ಚಂದ್ರಚೂಡ್ ಅವರ ಅಧಿಕಾರಾವಧಿಯಲ್ಲಿ ಗರಿಷ್ಠ ಮಟ್ಟದ ಪ್ರಕರಣಗಳು ವಿಲೇವಾರಿಯಾದ ದಿನ ಎನಿಸಿದೆ. ಇದರಲ್ಲಿ 105 ವರ್ಗಾವಣೆ ಅರ್ಜಿಗಳು ಮತ್ತು 71 ಜಾಮೀನು ಪ್ರಕರಣಗಳಿವೆ.
ಸುಪ್ರೀಂ ಕೋರ್ಟ್’ನ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಸಿಜೆಐ ಚಂದ್ರಚೂಡ್ ಅವರು ಜಾರಿಗೆ ತಂದ ಸುಧಾರಣೆ ಎಂಬಂತೆ ಪ್ರತಿದಿನ 10 ವರ್ಗಾವಣೆ ಮತ್ತು ಜಾಮೀನು ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುತ್ತಿದೆ. ನವೆಂಬರ್’ನಲ್ಲಿ ನಡೆದ ಪೂರ್ಣ ನ್ಯಾಯಾಲಯದ ಸಭೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಜಾಮೀನು ಪ್ರಕರಣಗಳಿಗೂ ಆದ್ಯತೆ ನೀಡಲಾಗುವುದು ಎಂದು ಈ ಹಿಂದೆ ಸಿಜೆಐ ತಿಳಿಸಿದ್ದರು.
ಹಾಲಿ ಮತ್ತು ನಿಕಟಪೂರ್ವ ಸಿಜೆಐಗಳು ಪ್ರಕರಣಗಳ ಇತ್ಯರ್ಥಕ್ಕೆ ಒತ್ತು ನೀಡಿದ್ದು, ನ್ಯಾ. ಯು ಯು ಲಲಿತ್ ಅವರು ಸಿಜೆಐ ಆಗಿದ್ದ ಎರಡು ತಿಂಗಳ ಅಧಿಕಾರಾವಧಿಯಲ್ಲಿ 10,000 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿತ್ತು. ಇವುಗಳಲ್ಲಿ ಮೊದಲ 5,000 ಪ್ರಕರಣಗಳು ಮೊದಲ ಹದಿಮೂರು ದಿನಗಳಲ್ಲೇ ವಿಲೇವಾರಿಯಾಗಿದ್ದವು.