ಮನೆ ಮನರಂಜನೆ ಸಿನಿ ವಿಮರ್ಶೆ: ಮ್ಯಾನ್ ಹೋಲ್ ದುರಂತಗಳಿಗೆ ಕನ್ನಡಿ ಹಿಡಿದ ‘ವಿಟ್ನೆಸ್’

ಸಿನಿ ವಿಮರ್ಶೆ: ಮ್ಯಾನ್ ಹೋಲ್ ದುರಂತಗಳಿಗೆ ಕನ್ನಡಿ ಹಿಡಿದ ‘ವಿಟ್ನೆಸ್’

0

ನಮ್ಮ ಹಲವು ನಿರ್ದೇಶಕರು ಮನರಂಜನೆಗೆ ಪ್ರಾಮುಖ್ಯತೆ ನೀಡಿ ಸಿನಿಮಾ ಮಾಡುವುದು ವಾಡಿಕೆ. ಆದರೆ ಕೆಲವು ನಿರ್ದೇಶಕರು ಸಿನಿಮಾ ಎಂಬ ಮಾಧ್ಯಮದ ಮೂಲಕ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುವ ಕೆಲಸವನ್ನು ಮಾಡುತ್ತಾರೆ. ಅಂತಹದ್ದೇ ಒಂದು ಚಿತ್ರ ‘ವಿಟ್ನೆಸ್’.

ನೇರವಾಗಿ ಸೋನಿ ಲಿವ್ ನಲ್ಲಿ ಬಿಡುಗಡೆಯಾಗಿರುವ ‘ವಿಟ್ನೆಸ್’ ಸಿನಿಮಾ ನಮ್ಮ ಸಮಾಜದಲ್ಲಿ ಕೆಳ ಸಮುದಾಯದವರು ಅನುಭವಿಸುತ್ತಿರುವ ಕಷ್ಟ ಮತ್ತು ನೋವನ್ನು ಎಳೆಎಳೆಯಾಗಿ ತೆರೆದಿಟ್ಟಿದೆ.

ನಮ್ಮ ಮುಂದುವರೆದ ಆಧುನಿಕ ಸಮಾಜದಲ್ಲಿ ಇನ್ನು ಮನುಷ್ಯನನ್ನು ಕೆಲವು ವಿಷಯದಲ್ಲಿ ಭೇದ ಭಾವದಿಂದಲೇ ನಡೆಸಿಕೊಳ್ಳುತ್ತಿರುವ ಈ ಸಮಾಜದ ಇನ್ನೊಂದು ಮುಖವನ್ನು ನಿರ್ದೇಶಕ ದೀಪಕ್ ಅವರು ‘ವಿಟ್ನೆಸ್’ ಚಿತ್ರದ ಮೂಲಕ ತಿಳಿಸಿದ್ದಾರೆ.

ಚೆನ್ನೈ/ಬೆಂಗಳೂರು/ಮುಂಬೈನ ಒಂದು ಮ್ಯಾನ್ ಹೋಲ್ ಕ್ಲೀನಿಂಗ್ ನಲ್ಲಿ ನಡೆಯುವ ಸಾವುಗಳ ಸುದ್ದಿಯನ್ನು ಒಂದು ಸಾಧಾರಣ ಸುದ್ದಿಯಾಗಿ ಓದಿ ಮುಂದುವರಿಯುತ್ತೇವೆ. ಆದರೆ ಆ ವಿಷಯದ ಹಿಂದೆ ಇರುವ ಜಾತಿ ವ್ಯವಸ್ಥೆ, ಅಧಿಕಾರಸ್ತರ ನಿಲುವು ಮತ್ತು ಭ್ರಷ್ಟ ವ್ಯವಸ್ಥೆ ಇದರ ಹಿಂದೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ತುಂಬ ಸ್ಪಷ್ಟವಾಗಿ ಚಿತ್ರದಲ್ಲಿ ತೋರಿಸಿದ್ದಾರೆ.

ನಟಿ ರೋಹಿಣಿ ಮತ್ತು ಕನ್ನಡದವರಾದ ಶ್ರದ್ಧಾ ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರೋಹಿಣಿ ನಗರ ಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನಗರದಲ್ಲಿ ರಾತ್ರಿ ಪಾಳಿಯಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡು ತಮ್ಮ ಮಗನೊಂದಿಗೆ ಚೆನ್ನೈ ನಗರ ಮೂಲೆಯಲ್ಲಿ ನೆಲೆಸಿದ್ದಾರೆ. ಅಪ್ಪ ಇಲ್ಲದೇ ಇದ್ದರೂ ತನಗಾಗಿ ಕಷ್ಟಪಡುವ ಅಮ್ಮನನ್ನು ಓದಿ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಹೊತ್ತಿದ್ದ ರೋಹಿಣಿಯ ಮಗ ಓದಿನ ಸಮಯದಲ್ಲೇ ಈಜು ಪಟುಗಳಿಗೆ ತರಬೇತಿ ನೀಡುವ ಕೆಲಸವನ್ನೂ ಮಾಡುತ್ತಿರುತ್ತಾನೆ.

ಒಂದು ದಿನ ರಾತ್ರಿ ಪ್ರತಿಷ್ಠಿತ ಅರ್ಪಾಮೆಂಟ್ ನಲ್ಲಿ ಮ್ಯಾನ್ ಹೋಲ್ ಕೆಲಸಕ್ಕೆ ಹೋಗಿ ಅಲ್ಲೇ ಬಿದ್ದು ಸಾಯುತ್ತಾನೆ. ಓದುತ್ತಿದ್ದ ಯುವಕ ಆ ಕೆಲಸಕ್ಕೆ ಹೋಗಲು ಕಾರಣವೇನು, ಮತ್ತೊಂದು ಕಡೆ ಅದೇ ಅರ್ಪಾಮೆಂಟ್’ನಲ್ಲಿರುವ ಶ್ರದ್ಧಾ ಶ್ರೀನಾಥ್ ಅವರು ರೋಹಿಣಿಗೆ ಹೇಗೆ ಮತ್ತು ಯಾಕೆ ಸಹಾಯ ಮಾಡುತ್ತಾರೆ ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಇಂದ್ರಾಣಿ ಪಾತ್ರದಲ್ಲಿ ನಟಿಸಿದ ರೋಹಿಣಿ ಈ ಸಿನಿಮಾದ ಮುಖ್ಯ ಬಲ. ಪಾತ್ರದ ಭಾವನೆಗಳನ್ನು ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಚಿತ್ರದ ದ್ವಿತೀಯಾರ್ಧದಲ್ಲಿ ಬಹುಪಾಲು ಕೋರ್ಟ ನಲ್ಲೇ ನಡೆಯುವ ಸನ್ನಿವೇಶಗಳು ನೈಜವಾಗಿದೆ.

ಸಿನಿಮಾದಲ್ಲಿ ಬರುವ ಅನೇಕ ಸಂಭಾಷಣೆಗಳಲ್ಲಿ ನಮ್ಮ ವ್ಯವಸ್ಥೆಯನ್ನು ಪ್ರಶ್ನಿಸುತ್ತ ನೋಡುಗನಿಗೂ ಮನಮುಟ್ಟುವಂತಿದೆ. ನಿರ್ದೇಶಕರು ಈ ವಿಷಯದ ಬಗ್ಗೆ ತುಂಬ ದೊಡ್ಡ ಮಟ್ಟದಲ್ಲಿ ಸಂಶೋಧನೆ ಮಾಡಿದ್ದಾರೆ ಎನ್ನುವುದು ಚಿತ್ರಕಥೆಯಲ್ಲಿ ಗೊತ್ತಾಗುತ್ತದೆ. ಮಂಗಳ ಗ್ರಹಕ್ಕೆ ಹೋಗುವಷ್ಟು ಆಧುನಿಕವಾಗಿರುವ ಈ ಕಾಲದಲ್ಲಿ ಮಲಹೊಂಡದ ಕೆಲಸಕ್ಕೆ ಇನ್ನೂ ನಾವು ಮನುಷ್ಯನ್ನು ಬಳಸಿಕೊಂಡು ಅವರ ಜೀವದ ಬಗ್ಗೆ ಕಾಳಜಿ ಇಲ್ಲದೆ ಇರುವುದು ಎಷ್ಟು ಸರಿ ಎನ್ನುವ ಸಮಾಜದ ಸೂಕ್ಷ್ಮ ವಿಚಾರವನ್ನು ನಿರ್ದೇಶಕ ಈ ಚಿತ್ರದಲ್ಲಿ ಪ್ರಶ್ನಿಸಿದ್ದಾನೆ.

ಚಿತ್ರ ಸೋನಿ ಲಿವ್ ನಲ್ಲಿ ಕನ್ನಡ ಭಾಷೆಯಲ್ಲಿ ಲಭ್ಯವಿದೆ. ಕೇವಲ ಮನರಂಜನೆಗಾಗಿ ಸಿನಿಮಾ ನೋಡುವವರಾದರೆ ನಿಮಗೆ ಸ್ವಲ್ಪ ಕಷ್ಟವಾಗಬಹುದು, ಆದರೆ ಸಮಾಜದ ಒಂದು ವಿಚಾರವನ್ನು ಸಿನಿಮಾವಾಗಿ ನೋಡಬಯಸುವುದಾದರೆ ‘ವಿಟ್ನೆಸ್’ ಖಂಡಿತ ನಿಮಗೆ ಇಷ್ಟವಾಗಲಿದೆ.