ಗದಗ(Gadag): ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆಗೈದು, ಅತಿಥಿ ಶಿಕ್ಷಕಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮುತ್ತಪ್ಪ ಹಡಗಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ,
ಆರೋಪಿ ಮುತ್ತಪ್ಪನನ್ನು ನರಗುಂದ ಪಟ್ಟಣ ಸಮೀಪ ಇರುವ ರೋಣ ಕ್ರಾಸ್ ಬಳಿ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೆ ಕಾರಣವೇನು ?
ವಿದ್ಯಾರ್ಥಿ ಸಾವಿಗೆ ಕಾರಣನಾದ ಆರೋಪಿ ಮುತ್ತಪ್ಪನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಿಸಲಾಗಿ, ಗೀತಾ ಮತ್ತು ನನ್ನ ನಡುವೆ ಸಲುಗೆ ಇತ್ತು ಎಂದು ತಿಳಿಸಿದ್ದಾನೆ. ಅಲ್ಲದೇ, ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಗೀತಾ ಬಾರಕೇರ ಸಹ ಶಿಕ್ಷಕ ಸಂಗನಗೌಡ ಪಾಟೀಲ ಜೊತೆ ಆಪ್ತವಾಗಿ ನಡೆದುಕೊಂಡಿದ್ದು ಸಿಟ್ಟು ತರಿಸಿತ್ತು. ಈ ಕಾರಣದಿಂದಲೇ, ಗೀತಾಗೆ ಸಂಬಂಧಪಟ್ಟವರು ಯಾರೇ ಸಿಕ್ಕರೂ ಹೊಡೆದು ಹಾಕಬೇಕು ಎಂದು ನಿರ್ಧರಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಮುತ್ತಪ್ಪ ಮತ್ತು ಗೀತಾ ನಡುವೆ ನಡೆದಿರುವ ವಾಟ್ಸ್‌ಆ್ಯಪ್ ಚಾಟ್, ಫೋನ್ ಕಾಲ್ ಹಿಸ್ಟರಿ ಸಿಕ್ಕಿದೆ. ಆದರೆ, ಆರೋಪಿ ಹೇಳುವಂತೆ ಇವರಿಬ್ಬರ ನಡುವೆ ಸಲುಗೆ ಇತ್ತೇ ಎಂಬುದು ದೃಢಪಡಲು ಇನ್ನಷ್ಟು ಸಾಕ್ಷಿ, ಮಾಹಿತಿ ಕಲೆ ಹಾಕಬೇಕಿದೆ. ಈಗ ಸಿಕ್ಕಿರುವ ಹೇಳಿಕೆ ಪ್ರಕಾರ ಆತ ಗೀತಾ ಮೇಲಿನ ಮೋಹದಿಂದ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರ ನಡುವಿನ ಸಲುಗೆ ಹೊರತು ಪಡಿಸಿ ಕೊಲೆ ಹಾಗೂ ಹಲ್ಲೆಗೆ ಬೇರೆ ಕಾರಣ ಇತ್ತೇ ಎಂಬುದು ಹೆಚ್ಚಿನ ವಿಚಾರಣೆ ಬಳಿಕ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ
ಹಲ್ಲೆಗೊಳಗಾಗಿ ಕಿಮ್ಸ್’ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಗೀತಾ ಬಾರಕೇರ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.