ಬೆಳಗಾವಿ(Belagavi): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿ ಆಯೋಜಿಸಿದ ವಿರಾಟ್ ಪಂಚಶಕ್ತಿ ಸಮಾವೇಶದ ಬೃಹತ್ ಪಾದಯಾತ್ರೆ ಹಿರೇಬಾಗೇವಾಡಿಯಿಂದ ಪ್ರಾರಂಭವಾಯಿತು.
ಬುಧವಾರ ಬೈಲಹೊಂಗಲದ ರಾಣಿ ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭವಾದ ಪಾದಯಾತ್ರೆ ಹಿರೇಬಾಗೇವಾಡಿ ತಲುಪಿ, ಗುರುವಾರ ಮತ್ತೆ ಸುವರ್ಣ ಸೌಧದ ಕಡೆಗೆ ಹೊರಟಿತು.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ, ಎ.ಬಿ.ಪಾಟೀಲ ಸೇರಿದಂತೆ ಹಲವು ಮುಖಂಡರು, ಅಪಾರ ಸಂಖ್ಯೆಯ ಮಹಿಳೆಯರು ಕೂಡ ಯಾತ್ರೆಯಲ್ಲಿ ಪಾಲ್ಗೊಂಡರು.
ಜೈ ಪಂಚಮಸಾಲಿ, ಜೈಜೈ ಪಂಚಮಸಾಲಿ ಎಂದು ನಿರಂತರ ಘೋಷಣೆ ಹಾಕುತ್ತ, ಬಸವಣ್ಣ, ಚನ್ನಮ್ಮ, ರಾಯಣ್ಣ, ಬೆಳವಡಿ ಮಲ್ಲಮ್ಮನ ಚಿತ್ರವಿರುವ ಧ್ವಜಗಳನ್ನು ಹಿಡಿದು ಸಾಗಿದರು.
ಸಮಾವೇಶಕ್ಕಾಗಿ ಸುವರ್ಣ ವಿಧಾನಸೌಧದಿಂದ 5 ಕಿ.ಮೀ ದೂರದ ಬಸ್ತವಾಡ- ಕಮಕಾರಟ್ಟಿ ಮಧ್ಯದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ.
ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯ ಜನ ಬಂದು ಸೇರಿದ್ದಾರೆ. ಪಾದಯಾತ್ರೆ ಈ ವೇದಿಕೆ ತಲುಪುವವರೆಗೂ ಚನ್ನಮ್ಮ, ರಾಯಣ್ಣನ ಶೌರ್ಯಗಳ ಕ್ರಾಂತಿಗೇತೆಗಳ ಗಾಯನ ನಡೆದಿದೆ.
ವಿಶಾಲವಾದ ಜಾಗದಲ್ಲಿ 10 ಸಾವಿರಕ್ಕೂ ಅಧಿಕ ಕುರ್ಚಿಗಳನ್ನು ಹಾಕಲಾಗಿದೆ. ಊಟಕ್ಕಾಗಿ ನಾಲ್ಕು ಕಡೆ ಪೆಂಡಾಲ್ ಹಾಕಲಾಗಿದೆ. 1,000 ಕ್ವಿಂಟಲ್ ಅಕ್ಕಿ, ಅಪಾರ ಪ್ರಮಾಣದ ರೂಟ್ಟಿ, ತರಕಾರಿಗಳನ್ನು ತರಿಸಲಾಗಿದೆ.
ಹಲವು ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಬಸ್, ಖಾಸಗಿ ಬಸ್, ಕಾರ್, ಜೀಪ್, ಟೆಂಪೊ ಮುಂತಾದ ವಾಹನಗಳಲ್ಲಿ ಜನ ತಂಡೋಪ ತಂಡವಾಗಿ ಬಂದು ಸೇರಿದ್ದಾರೆ.















