ಹೊಸಪೇಟೆಯಲ್ಲಿ ‘ಕ್ರಾಂತಿ’ ಚಿತ್ರದ ಪ್ರಚಾರ ಮಾಡುವ ವೇಳೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇಂಥದ್ದೊಂದು ಘಟನೆಯನ್ನು ಕನ್ನಡ ಚಿತ್ರರಂಗ ಒಕ್ಕೊರಲಿನಿಂದ ಖಂಡಿಸಿದೆ.
ಈ ಮಧ್ಯೆ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
‘ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ ಸುಳ್ಳು ಸತ್ಯವಾಗುವುದಿಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ..’ ಎಂದು ಹೇಳಿದ್ದಾರೆ.
ಪತ್ರದಲ್ಲೇನಿದೆ?
ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬ ಚಿಕ್ಕವನು. ಆದ್ರೆ, ತುಂಬ ಹೆಮ್ಮೆಯಿಂದ ಒಂದು ವಿಷಯ ಹೇಳೇಕಂದ್ರೆ.. ನಮ್ಮ ಕುಟುಂಬದ ಅಭಿಮಾನಿಗಳು ನಮ್ಮ ತಾತನವರ ಕಾಲದಿಂದ, ಇವತ್ತಿನವರಿಗೂ ಕನ್ನಡ ಚಿತ್ರರಂಗದ ಪ್ರತಿ ಕಲಾವಿದರಿಗೂ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸಭ್ಯತೆ ಮತ್ತು ಘನತೆಯಿಂದಲೇ ನಡೆದುಕೊಂಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ, ಪ್ರೀತಿ ವಿಶ್ವಾಸವನ್ನು ಹಂಚುವ ಸಂಸ್ಕೃತಿಯುಳ್ಳ ಅಭಿಮಾನಿಗಳೇ ದೇವರು.
ಆದರೆ, ಗೌರವ ಯಾವಾಗಲೂ ಪರಸ್ಪರ ಅಲ್ವಾ..? ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ. ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ. ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ, ಅವರ ಭಾವನೆಗಳನ್ನು ನೋಯಿಸಿದರೆ, ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುವುದು ‘ಬಹಿರಂಗವಾಗಿಯೇ’ ವಿನಃ ನಡೆಯುವ ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಆಗೋದಿಲ್ಲ.
ನಡೆದಿರುವ ಕೃತ್ಯ ಖಂಡನೀಯ. ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ ಸುಳ್ಳು ಸತ್ಯವಾಗುವುದಿಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ.. ಕಾಣುವ ಬುದ್ಧಿ ನಮ್ಮದಾಗಿರಲಿ.. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ. ಗುರುರಾಯರ ಆಶೀರ್ವಾದ ಎಲ್ಲರ ಮೇಲೆ ಸದಾ ಸಂಪೂರ್ಣವಾಗಿ ಇರಲಿ…ಜೈ ಹಿಂದ್ ಜೈ ಕರ್ನಾಟಕ ಮಾತೆ..’ ಎಂದು ಯುವ ರಾಜ್ ಕುಮಾರ್ ಹೇಳಿದ್ದಾರೆ.