ಬೆಂಗಳೂರು: ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಎರಡನೇ ಟೆಸ್ಟ್’ನಿಂದ ಕುಲ್ದೀಪ್ ಯಾದವ್ ಅವರನ್ನು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಟೀಮ್ ಮ್ಯಾನೇಜ್’ಮೆಂಟ್ ವಿರುದ್ದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನನ್ನು ಕೈಬಿಟ್ಟಿದ್ದು ದುರಾದೃಷ್ಠಕರ, ನಂಬಲು ಸಾಧ್ಯವಿಲ್ಲ. ಸೌಮ್ಯ ಪದಗಳಲ್ಲಿ ಇಷ್ಟೇ ಹೇಳಬಲ್ಲೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಕಿತ್ತು, 40 ರನ್’ಗಳ ಅಮೂಲ್ಯ ಕೊಡುಗೆ ನೀಡಿದ್ದ ಕುಲದೀಪ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರನ್ನು ಕೈಬಿಟ್ಟು, ಮಧ್ಯಮ ವೇಗಿ ಜಯದೇವ್ ಉನಾದ್ಕತ್ ಅವರಿಗೆ ಅವಕಾಶ ನೀಡಲಾಗಿದೆ. ನಾಯಕ ಕೆ.ಎಲ್ ರಾಹುಲ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಈ ನಿರ್ಧಾರದ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.
ಕುಲ್’ದೀಪ್ ಯಾದವ್’ರನ್ನು ಕೈಬಿಟ್ಟಿದ್ದು ದುರದೃಷ್ಟಕರ. ಪಿಚ್ ವರ್ತನೆಗೆ ಅನುಗುಣವಾಗಿ ಬೇರೆ ಸ್ಪಿನ್ನರ್ ಒಬ್ಬರನ್ನು ಕೈಬಿಡಬಹುದಿತ್ತು. ಇದು ನಂಬಲು ಸಾಧ್ಯವಿಲ್ಲ. ಸೌಮ್ಯ ಪದಗಳಲ್ಲಿ ಇಷ್ಟೇ ಹೇಳಬಲ್ಲೆ. ನಾನು ಇನ್ನೂ ಕಠಿಣ ಪದಗಳನ್ನು ಬಳಕೆ ಮಾಡಬೇಕು ಎಂದಿದ್ದೆ. 20 ವಿಕೆಟ್’ಗಳ ಪೈಕಿ 8 ವಿಕೆಟ್ ಪಡೆದವರನ್ನು ಕೈಬಿಟ್ಟಿದ್ದು ಸರಿಯಲ್ಲ ಎಂದು ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.