ಮನೆ ಸುದ್ದಿ ಜಾಲ ಮೈಸೂರು ಜಿಲ್ಲೆಯಲ್ಲಿ ಯುಡಿಐಡಿ ಅಕ್ರಮ ಜಾಲ: ತನಿಖೆಗೆ ಡಿಸಿ ಸೂಚನೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ

ಮೈಸೂರು ಜಿಲ್ಲೆಯಲ್ಲಿ ಯುಡಿಐಡಿ ಅಕ್ರಮ ಜಾಲ: ತನಿಖೆಗೆ ಡಿಸಿ ಸೂಚನೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ

0

ಮೈಸೂರು(Mysuru): ಜಿಲ್ಲೆಯಲ್ಲಿ ಯುಡಿಐಡಿ (ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ)ಯನ್ನು ಅಕ್ರಮವಾಗಿ ನೀಡುತ್ತಿರುವುದು ಮತ್ತು ಅದನ್ನು ಬಳಸಿ ಅನರ್ಹರೂ ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಸರ್ಕಾರೇತರ ಸಂಘ–ಸಂಸ್ಥೆಗಳವರು ಹಾಗೂ ಅಂಗವಿಕಲರು ಈ ಕುರಿತು ಮಾಹಿತಿ ನೀಡಿದರು.

ಇದಕ್ಕೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ನೂರಾರು ಮಂದಿ ಸರ್ಕಾರದ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಳವಳವನ್ನೂ ವ್ಯಕ್ತಪಡಿಸಿದರು.

ನಮಗೆ ಶೇ 75ರಷ್ಟು ಶ್ರವಣದೋಷವಿದೆ ಎಂದು ಹಲವರು ಪ್ರಮಾಣಪತ್ರ ಪಡೆದು ಯುಡಿಐಡಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ನಕಲಿ ಅಂಗವಿಕಲರು ಬಹಳ ಸಂಖ್ಯೆಯಲ್ಲಿದ್ದಾರೆ. ಎಲ್ಲ ಅಂಗಗಳೂ ಸರಿಯಾಗಿದ್ದರೂ ಯುಡಿಐಡಿ ನೀಡಿರುವುದು ಕಣ್ಮುಂದಿವೆ ಎಂದು ಅಂಗವಿಕಲರು ದೂರಿದರು.

ಕೆ.ಆರ್.ಆಸ್ಪತ್ರೆಯಲ್ಲಿ ಸಕ್ರಿಯವಾಗಿರುವ ಜಾಲವದು. ಸಾವಿರಾರು ರೂಪಾಯಿಗೆ ಮಾರಲಾಗುತ್ತಿದೆ. ಅಲ್ಲಿನ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಬಹಳಷ್ಟು ಮಂದಿ ಶಾಮೀಲಾಗಿದ್ದಾರೆ. ಆಯಿಷ್‌’ನಿಂದಲೂ ಹಲವರು ಯುಡಿಐಡಿಯನ್ನು ಅಕ್ರಮವಾಗಿ ಪಡೆದಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಯುಡಿಐಡಿ ನೀಡುವ ವಿಭಾಗದ ಕಂಪ್ಯೂಟರ್‌ ಆಪರೇಟರ್‌ ಅನ್ನು ವಿಚಾರಣೆಗೆ ಒಳಪಡಿಸಿದರೆ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಯುಡಿಐಡಿಯನ್ನು ಅಕ್ರಮವಾಗಿ ಪಡೆದಿರುವುದು ಕಂಡುಬಂದರೆ ಕೊಟ್ಟಿರುವ ವೈದ್ಯರ ಮೇಲೆ ಕ್ರಮ ಜರುಗಿಸಲಾಗುತ್ತದೆ. ದೂರಿನ ಜೊತೆ, ಪುರಾವೆ ಒದಗಿಸಿದರೆ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. ವೈಕಲ್ಯದ ಬಗ್ಗೆ ಪ್ರಮಾಣೀಕರಿಸುವ ವೈದ್ಯರ ಸಭೆಯನ್ನು ಶೀಘ್ರದಲ್ಲೇ ಕರೆಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.