ಮನೆ ಸುದ್ದಿ ಜಾಲ ಅಂತರ್ಜಲ ಹೆಚ್ಚಳ,ಜಾಗೃತಿ ಅಗತ್ಯ : ಕರುಣಾಕರ್

ಅಂತರ್ಜಲ ಹೆಚ್ಚಳ,ಜಾಗೃತಿ ಅಗತ್ಯ : ಕರುಣಾಕರ್

0

ಮೈಸೂರು(Mysuru): ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಹೆಚ್ಚಳ ಸಂಬಂಧಿಸಿದಂತೆ ಪ್ರತಿಯೊಬ್ಬರು ಜಾಗೃತಿವಹಿಸಬೇಕಾಗಿದೆ ಎಂದು ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ (ಗ್ರಾ.ಉ)ರಾದ ಕರುಣಾಕರ್ ಅವರು ಹೇಳಿದರು.

ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಅಮೃತ ಮಹೋತ್ಸವದಡಿ ಅಭಿವೃದ್ಧಿಪಡಿಸುತ್ತಿರುವ ಬಾವಲಾಳು ಕೆರೆ ಆವರಣದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ರೈತರ ದಿನ(ಕಿಸಾನ್ ದಿವಸ್) ಪ್ರಯುಕ್ತ ಜಲಸಂಜೀವಿನಿ ಸಂಬಂಧಿಸಿದಂತೆ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆಗಿಂತ ಇಂದು ನೀರು ಹೆಚ್ಚಿನದಾಗಿ ದೊರೆಯುತ್ತಿದೆ. ಆದರೆ, ಅದರ ಸದ್ಭಳಕೆಯಾಗುತ್ತಿಲ್ಲ. ಹೀಗಾಗಿ, ನೀರನ್ನು ಅನವಶ್ಯಕವಾಗಿ ವ್ಯರ್ಥ ಮಾಡದೇ, ಅಂತರ್ಜಲ ಹೆಚ್ಚಿಸುವ ಕಾರ್ಯವಾಗಬೇಕಿದೆ ಎಂದರು.

ದೇಶದ ಬೆನ್ನೆಲುಬಾಗಿರುವ ರೈತರು ಸರಕಾರಿ ಇಲಾಖೆಗಳಿಂದ ದೊರೆಯುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕೃಷಿ ಚಟುವಟಿಕೆ ಜೊತೆಗೆ ಆರ್ಥಿಕವಾಗಿಯು ಅಭಿವೃದ್ಧಿ ಹೊಂದುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಜಲ ಸಂಜೀವಿನಿ ಯೋಜನೆಯಡಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳುವಂತಹ ಕಾಮಗಾರಿಗಳು ನಿಸರ್ಗಕ್ಕೆ ಪೂರಕವಾಗಿರಬೇಕು ಎಂಬ ಉದ್ದೇಶದಿಂದ ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಂತ್ರಿಕ ಸಂಯೋಜಕ ಯು.ಎಸ್.ಹರ್ಷಿತ್ ಮಾತನಾಡಿ, ಡಿಸೆಂಬರ್ 23 ನೇ ತಾರೀಖಿನಂದು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸುವ ಮೂಲಕ ರೈತರಿಗೆ ಗೌರವವನ್ನು ಸೂಚಿಸುವಂತಹ ಕಾರ್ಯವಾಗಿದೆ ಎಂದರು.

ಮುಂದಿನ ಆರ್ಥಿಕ ವರ್ಷದಿಂದ ಜಲಸಂಜೀವಿನಿ ಕಾರ್ಯಕ್ರಮ ಅನುಷ್ಠಾನಗೊಳಿಸಲಿದ್ದು, ವೈಜ್ಞಾನಿಕ ಯೋಜನೆ, ಗೋಮಾಳ ಅಭಿವೃದ್ಧಿ, ವಿಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಸುಸ್ಥಿರ ಜೀವನೋಪಾಯಕ್ಕೆ ಸಹಾಯಕವಾಗಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಜಲಸಂಜೀವಿನಿ ಅನುಷ್ಠಾನ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ರೈತರು ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಮಹಾದೇವ್, ಹಾಲಿನ ಡೈರಿ ಅಧ್ಯಕ್ಷರಾದ ಎಸ್.ಕೆ.ಬಸವಣ್ಣ, ಗ್ರಾ.ಪಂ ಕಾರ್ಯದರ್ಶಿ ಧನಂಜಯ್, ಐಇಸಿ ಸಂಯೋಜಕ ರವಿಕುಮಾರ್.ಡಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.