ನೀಲಗಿರಿ ಎಣ್ಣೆಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಇದೊಂದು ಔಷಧೀಯ ಗುಣಲಕ್ಷಣಗಳನ್ನು ಒಳಗೊಂಡಿರುವ ವನ್ಯಮೂಲಿಕೆ ಎಂದು ಹೇಳಬಹುದು. ಮನುಷ್ಯನ ಆರೋಗ್ಯಕ್ಕೆ ಹಲವು ಆಯಾಮಗಳಲ್ಲಿ ನೀಲಗಿರಿ ಎಣ್ಣೆ ಪ್ರಯೋಜನಕ್ಕೆ ಬರುತ್ತದೆ. ಶೀತ, ಕೆಮ್ಮು, ನೆಗಡಿ, ಕೀಲು ನೋವು, ಮೈ ಕೈ ನೋವು ಇವುಗಳಿಗೂ ಸಹ ಇದು ಪರಿಹಾರ ಒದಗಿಸುತ್ತದೆ….
ಅಧ್ಯಯನಗಳು ಹೇಳುವ ಪ್ರಕಾರ…
• ಕೆಲವೊಂದು ಅಧ್ಯಯನಗಳು ಹೇಳುವ ಹಾಗೆ ನೀಲಗಿರಿ ಎಣ್ಣೆ ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಅದರ ಪ್ರಭಾವದಿಂದ ಕೆಟ್ಟ ಬ್ಯಾಕ್ಟೀರಿಯಾ ಜೀವಕೋಶಗಳು ಅಭಿವೃದ್ಧಿ ಹೊಂದಲು ಸಾಧ್ಯವಿರುವುದಿಲ್ಲ.
• ಕಫ ಮತ್ತು ಎದೆ ಬಿಗಿತ ಸಮಸ್ಯೆಯನ್ನು ಸುಲಭವಾಗಿ ಇದು ಪರಿಹಾರ ಮಾಡುತ್ತದೆ. ಅಷ್ಟೇ ಅಲ್ಲದೆ ಸೋಂಕುಗಳನ್ನು ಸಹ ದೂರ ಇರಿಸುತ್ತದೆ. ಆರೋಗ್ಯಕರವಾದ ದೇಹವನ್ನು ರಕ್ಷಿಸುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇದರಲ್ಲಿದೆ.
ಶೀತಾ, ನೆಗಡಿ, ಕೆಮ್ಮಿಗೆ ರಾಮಬಾಣ
ಚಳಿಗಾಲದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳಿಗೆ ನೀಲಗಿರಿ ಎಣ್ಣೆ ಪರಿಹಾರದಾಯಕವಾಗಿ ಕೆಲಸ ಮಾಡಬಲ್ಲದು. ಅದರಂತೆ ವಿವಿಧ ಆರೋಗ್ಯ ತೊಂದರೆಗಳಿಗೆ ಇದರ ಪರಿಹಾರ ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ….
ಕಟ್ಟಿಕೊಂಡ ಮೂಗಿಗೆ
• ಕೆಲವು ಹನಿಗಳಷ್ಟು ನೀಲಗಿರಿ ಎಣ್ಣೆ ತೆಗೆದುಕೊಂಡು ಅದನ್ನು ಕುದಿಯುವ ನೀರಿನಲ್ಲಿ ಹಾಕಿ, ನೀರಿನಿಂದ ಬರುವ ಆವಿಯನ್ನು ಮುಖ ಇರಿಸಿ ಮೂಗಿನ ಮೂಲಕ ಒಳ ತೆಗೆದುಕೊಳ್ಳಬೇಕು. ಮೂಗು ಹಾಗು ಬಾಯಿಯ ಮೂಲಕ ಗಂಟಲಿಗೆ ನೀಲಗಿರಿಯ ಸಾರ ಹೋಗಿ ತಲುಪಬೇಕು.
• ಇದರಿಂದ ಶ್ವಾಸಕೋಶ ಸ್ವಚ್ಛವಾಗುತ್ತದೆ ಮತ್ತು ಅಲ್ಲಿರುವ ಬ್ಯಾಕ್ಟೀರಿಯಾಗಳು ಹಾನಿಯಾಗುತ್ತವೆ. ಇದರಿಂದ ಉಸಿರಾಟದ ಸಮಸ್ಯೆ ದೂರವಾಗುತ್ತದೆ ಮತ್ತು ನಿಮ್ಮ ಕೆಮ್ಮು, ಕಫದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಈ ವಿಷ್ಯ ನೆನಪಿಡಿ…
ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ನಿಮ್ಮ ತಲೆಯನ್ನು ಮತ್ತು ಹಣೆಯನ್ನು ಒಂದು ಬಟ್ಟೆಯಿಂದ ಕವರ್ ಮಾಡಿಕೊಳ್ಳಿ. ಏಕೆಂದರೆ ಇದ್ದಕ್ಕಿದ್ದಂತೆ ತಾಪಮಾನ ಬದಲಾಗುವು ದರಿಂದ ಆಗಬಹುದಾದ ಆರೋಗ್ಯದ ತೊಂದರೆಯನ್ನು ಇದು ಪರಿಹರಿಸುತ್ತದೆ.
ನಿದ್ರೆ ಮಾಡುವಾಗ, ಸುಲಭ ಉಸಿರಾಟ ಸಾಧ್ಯ
• ನೀವು ಮಲಗಿಕೊಂಡ ಸಂದರ್ಭದಲ್ಲಿ ನಿಮ್ಮ ಎದೆ ಹಾಗೂ ಗಂಟಲಿನಲ್ಲಿ ಕಫ ಇದ್ದರೆ ನಿಮಗೆ ಉಸಿರಾಟದ ತೊಂದರೆ ಎದುರಾಗುತ್ತದೆ. ಇದರಿಂದ ನಿಮ್ಮ ಗಂಟಲು ಹಾಗೂ ಮೂಗಿನ ಭಾಗದಲ್ಲಿ ಕಫ ಶೇಖರಣೆಯಾಗಿ ಕ್ರಮೇಣವಾಗಿ ಅದು ಗಟ್ಟಿಯಾಗುತ್ತದೆ.
• ಈ ಸಂದರ್ಭದಲ್ಲಿ ಗಂಟಲು ಹಾಗೂ ಎದೆ ಕಟ್ಟಿದ ಹಾಗೆ ಅನುಭವ ಉಂಟಾಗುತ್ತದೆ. ಇದಕ್ಕೆ ಪರಿಹಾರವಾಗಿ ನೀವು ಒಂದು ಮೆತ್ತೆಗಿನ ಬಟ್ಟೆ ತೆಗೆದುಕೊಂಡು ಅದರಲ್ಲಿ ಕೆಲವು ಹನಿಗಳಷ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಅದನ್ನು ಸುತ್ತಿ ನಿಮ್ಮ ತಲೆ ದಿಂಬಿನ ಕೆಳಗಡೆ ಇಟ್ಟುಕೊಳ್ಳಿ.
• ನಿಧಾನವಾಗಿ ನೀಲಗಿರಿಯ ವಾಸನೆ ಮೂಗಿಗೆ ತಾಗುತ್ತದೆ ಮತ್ತು ರಾತ್ರಿಯ ಹೊತ್ತು ಆರಾಮದಾಯಕ ನಿದ್ರೆ ನಿಮ್ಮದಾಗುತ್ತದೆ. ಇದನ್ನು ಕನಿಷ್ಠ ಮೂರು ದಿನಗಳ ಕಾಲ ನಿರಂತರವಾಗಿ ಮಾಡಿ.
ಹಗಲು ಹೊತ್ತಿನಲ್ಲಿ ಮೂಗು ಕಟ್ಟಿಕೊಂಡಿದ್ದರೆ
• ಕೆಲವು ಜನರಿಗೆ ವಿಪರೀತ ಶೀತ ಹೆಚ್ಚಾಗಿ ಬೆಳಗಿನ ಸಮಯದಲ್ಲಿ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ದಿನಕ್ಕೆ ಮೂರು ಬಾರಿ ನೀಲಗಿರಿಯ ಪರಿಹಾರವನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ.
• ಕೆಲವು ಹನಿಗಳಷ್ಟು ನೀಲಗಿರಿ ಎಣ್ಣೆಯನ್ನು ಒಂದು ಹ್ಯಾಂಡ್ ಕರ್ಚೀಫ್ ನಲ್ಲಿ ಹಾಕಿ ಅದನ್ನು ಮೂಗಿನ ಬಳಿ ಇಟ್ಟು ಕೊಂಡು ಅದರ ವಾಸನೆಯನ್ನು ತೆಗೆದುಕೊಳ್ಳಬೇಕು. ಆನಂತರದಲ್ಲಿ ಮುಂದಿನ ಬಳಕೆಗಾಗಿ ಹ್ಯಾಂಡ್ ಕರ್ಚೀಫ್ ಅನ್ನು ಒಂದು ಜಿಪ್ ಲಾಕ್ ಬ್ಯಾಗ್ ನಲ್ಲಿ ಹಾಕಿ ಎತ್ತಿಡಿ. • ನೀವು ಬೇಕೆಂದರೆ ನಿಮ್ಮ ಜೊತೆ ಒಂದು ಸಣ್ಣ ಬಾಟಲ್ ನೀಲಗಿರಿ ಎಣ್ಣೆಯನ್ನು ಇಟ್ಟುಕೊಳ್ಳ ಬಹುದು. ಬೇಕೆಂದಾಗ ಕರ್ಚೀಫ್ ಗೆ ಹಾಕಿ ಅದರಿಂದ ವಾಸನೆ ತೆಗೆದುಕೊಳ್ಳಬಹುದು. ಆದರೆ ನಿಮ್ಮ ಮುಖ ಹಾಗೂ ಮೂಗು ಒರೆಸಿಕೊಳ್ಳಲು ಇದೇ ಕರ್ಚಿಫ್ ಬಳಸಬೇಡಿ. ಸೂಕ್ಷ್ಮವಾಗಿರುವ ಕಾರಣಕ್ಕೆ ಇದರಿಂದ ನಿಮ್ಮ ಮುಖದ ಚರ್ಮ ಉರಿ ಬರುತ್ತದೆ.