ಮನೆ ಅಪರಾಧ ಐಸಿಐಸಿಐ ಬ್ಯಾಂಕ್‌ ಸಾಲ ವಂಚನೆ ಪ್ರಕರಣ: ವಿಡಿಯೊಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಬಂಧನ

ಐಸಿಐಸಿಐ ಬ್ಯಾಂಕ್‌ ಸಾಲ ವಂಚನೆ ಪ್ರಕರಣ: ವಿಡಿಯೊಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಬಂಧನ

0

ಮುಂಬೈ(Mumbai): ವಿಡಿಯೋಕಾನ್​​ ಗ್ರೂಪ್ ಕಂಪನಿ ಮತ್ತು ಐಸಿಐಸಿಐ ಬ್ಯಾಂಕ್ ನಡುವಿನ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಕಂಪನಿಯ ಮುಖ್ಯಸ್ಥ ವೇಣುಗೋಪಾಲ್​ ಧೂತ್’​ರನ್ನು ಕೇಂದ್ರ ತನಿಖಾ ದಳ(ಸಿಬಿಐ) ಇಂದು ಬಂಧಿಸಿದೆ.

ಐಸಿಐಸಿಐ ಬ್ಯಾಂಕ್‌’ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್‌, ಅವರ ಗಂಡ ದೀಪಕ್‌ ಕೊಚ್ಚರ್‌ ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಸ್ಟಡಿಗೆ ಪಡೆದಿತ್ತು. ಇದಾದ ಎರಡೇ ದಿನಗಳಲ್ಲಿ ಸಿಬಿಐ ವೇಣುಗೋಪಾಲ್ ಅವರನ್ನು ಬಂಧಿಸಿದೆ.

ಐಸಿಐಸಿಐ ಬ್ಯಾಂಕ್‌’ನ ಕ್ರೆಡಿಟ್ ಪಾಲಿಸಿ, ಆರ್‌’ಬಿಐ ಮಾರ್ಗಸೂಚಿ ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ವಿಡಿಯೊಕಾನ್ ಗ್ರೂಪ್‌’ನ ಕಂಪನಿಗಳಿಗೆ ₹3,250 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂಬುದು ಸಿಬಿಐ ಆರೋಪವಾಗಿದೆ.

ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌’ಐಆರ್‌’ನಲ್ಲಿ ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್ ಮತ್ತು ವಿಡಿಯೊಕಾನ್ ಗ್ರೂಪ್‌’ನ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌’ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ವಿಡಿಯೊಕಾನ್ ಗ್ರೂಪ್, ಐಸಿಐಸಿಐ ಬ್ಯಾಂಕ್‌’ನಿಂದ 3,250 ಕೋಟಿ ಸಾಲ ಪಡೆದ ಕೆಲ ತಿಂಗಳ ನಂತರ ವಿಡಿಯೊಕಾನ್ ಪ್ರವರ್ತಕ ವೇಣುಗೋಪಾಲ್, ನ್ಯೂಪವರ್‌’ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು.

ಆರೋಪಿಯು(ಚಂದಾ ಕೊಚ್ಚರ್) ಐಸಿಐಸಿಐ ಬ್ಯಾಂಕ್‌ಗೆ ವಂಚನೆ ಮಾಡುವ ದೃಷ್ಟಿಯಿಂದ ಇತರರ ಜೊತೆ ಸೇರಿಕೊಂಡು ಖಾಸಗಿ ಕಂಪನಿಗೆ ಸಾಲವನ್ನು ಮಂಜೂರು ಮಾಡಿದ್ದಾರೆ ಎಂಬುದು ಸಿಬಿಐ ಆರೋಪವಾಗಿದೆ.

ಪ್ರಕರಣ ಕುರಿತಂತೆ 2019ರಲ್ಲಿ ಸಿಬಿಐ ಎಫ್‌’ಐಆರ್ ದಾಖಲಿಸಿತ್ತು.