ಮನೆ ಕಾನೂನು ಕೋವಿಡ್ ಲಸಿಕೆಯನ್ನು ವಿದೇಶಗಳಿಗೆ ಪೂರೈಸುವ ಭಾರತದ ನಿರ್ಧಾರ ಸಾಂವಿಧಾನಿಕ ನೈತಿಕತೆಗೆ ಉದಾಹರಣೆ: ನ್ಯಾ ಸೂರ್ಯಕಾಂತ್

ಕೋವಿಡ್ ಲಸಿಕೆಯನ್ನು ವಿದೇಶಗಳಿಗೆ ಪೂರೈಸುವ ಭಾರತದ ನಿರ್ಧಾರ ಸಾಂವಿಧಾನಿಕ ನೈತಿಕತೆಗೆ ಉದಾಹರಣೆ: ನ್ಯಾ ಸೂರ್ಯಕಾಂತ್

0

ಪ್ರಪಂಚದ 80 ದೇಶಗಳಿಗೆ ಕೋವಿಡ್-19 ಲಸಿಕೆ ಪೂರೈಸಲು ನಿರ್ಧರಿಸಿದ ಭಾರತದ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮೆಚ್ಚುಗೆ ಸೂಚಿಸಿದ್ದು, ಇದು ಸಾಂವಿಧಾನಿಕ ನೈತಿಕತೆಗೆ ಉದಾಹರಣೆ ಎಂದು ವ್ಯಾಖ್ಯಾನಿಸಿದರು.

ಹರಿಯಾಣದ ಕುರುಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ 16ನೇ ಅಖಿಲ ಭಾರತೀಯ ಅಧಿವಕ್ತ ಪರಿಷತ್ನ ರಾಷ್ಟ್ರೀಯ ಸಮಾವೇಶದಲ್ಲಿ “ಪುನರುತ್ಥಾನ ಭಾರತದ 75 ವರ್ಷಗಳು: ಕಾನೂನು ಮತ್ತು ನ್ಯಾಯದ ಬದಲಾದ ರೂಪುರೇಷೆಗಳು” ಎಂಬ ವಿಚಾರದ ಕುರಿತು ಅವರು ಮಾತನಾಡಿದರು.

“ತಕ್ಷಣಕ್ಕೆ ಲಸಿಕೆ ದೊರೆಯದಿರುವ ಬಡತನವಿರುವ ಪ್ರಪಂಚದ ವಿವಿಧ ಭಾಗಗಳ ಜನರಿಗೆ ಲಸಿಕೆ ನೀಡುವುದು ಅತಿಮುಖ್ಯವಾಗಿದೆ. ಇದು ಕೇವಲ ಸರ್ಕಾರದ ತೀರ್ಮಾನವಲ್ಲ ಬದಲಿಗೆ ಇದು ಒಗ್ಗಟ್ಟು ಮತ್ತು ಹಂಚಿಕೊಳ್ಳುವಿಕೆಯನ್ನು ತೋರಿಸುತ್ತದೆ. ನಾವು ಸಾಂವಿಧಾನಿಕ ನೈತಿಕತೆಯ ಬಗ್ಗೆ ಯೋಚಿಸುವಾಗ ಸಾಮಾನ್ಯ ಒಳಿತನ್ನು ನೋಡಬೇಕಾಗುತ್ತದೆ. ಆದರೆ, ಇದು ಸಾಮಾಜಿಕ ನಿಯಮಗಳು ಅಥವಾ ಪದ್ಧತಿಗಳಿಗೆ ಅಧೀನವಾಗಿದೆ ಎನ್ನಲಾಗದು” ಎಂದು ಹೇಳಿದರು.

“ಲಸಿಕೆ ಪೂರೈಕೆಯು ಸಾಂವಿಧಾನಿಕ ಮೌಲ್ಯಗಳ ಅನುಸರಣೆಯ ಸಾರವನ್ನು ಹೇಳುತ್ತದೆ. ಆದರೆ, ಅದನ್ನು ಅಮೂರ್ತ ಅಥವಾ ನಿರ್ವಾತದಲ್ಲಿ ಅರ್ಥೈಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದರು.

“ನಮ್ಮ ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದ ದೇಶದ ಶತಮಾನಗಳಿಗೂ ಹಳೆಯದಾದ ನೈತಿಕ ವಿಚಾರಗಳು ಸಾಂವಿಧಾನಿಕ ನೈತಿಕ ತತ್ವಗಳಿಗೆ ಹಾದಿ ತೋರಿವೆ” ಎಂದು ವ್ಯಾಖ್ಯಾನಿಸಿದರು.

“ಮುಂದಿನ 75 ವರ್ಷಗಳು ನಾವು ವಿಭಿನ್ನ ಕರ್ತವ್ಯಗಳನ್ನು ಗುರುತಿಸಿ, ಅವುಗಳಿಗೆ ಪ್ರಾಮಾಣಿಕವಾಗಿರಬೇಕು. ಹಕ್ಕುಗಳು ಮತ್ತು ಕರ್ತವ್ಯಗಳು ಒಂದಕ್ಕೊಂದು ಪೂರಕವಾಗಿರಬೇಕು. ಈಗ ಅದಕ್ಕೆ ಕಾಲ ಕೂಡಿಬಂದಿದೆ” ಎಂದು ನ್ಯಾ. ಸೂರ್ಯಕಾಂತ್ ಹೇಳಿದರು.