Saval TV on YouTube
ತಿರುವನಂತಪುರಂ: ಗೌತಮ್ ಅದಾನಿ ಸಮೂಹದ ವಿಳಿಂಞ ಅಂತರರಾಷ್ಟ್ರೀಯ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆಯು 100ನೇ ದಿನಕ್ಕೆ ಕಾಲಿಟ್ಟಿದ್ದು, ಮೀನುಗಾರರು ದೋಣಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮುದ್ರ ತೀರ ಇಲ್ಲದಿದ್ದರೆ ನಮಗೆ ಬದುಕಿಲ್ಲ. ಬಂದರು ಚಾಲ್ತಿಗೆ ಬಂದರೆ ನಮ್ಮ ತೀರವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮೀನುಗಾರರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರಿಂದ ಕೇರಳ ಪೊಲೀಸರು ಬಂದರಿಗೆ ಮಂಗಳವಾರ ಬಿಗಿ ಭದ್ರತೆ ಒದಗಿಸಿದ್ದರು.
ಜನರ ಪ್ರತಿಭಟನೆಯ ಕಾರಣ 3 ತಿಂಗಳಿನಿಂದ ಬಂದರು ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಕೆಥೋಲಿಕ್ ಧರ್ಮಗುರುಗಳು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಂದರು ನಿರ್ಮಾಣದಿಂದ ಅಲ್ಲಿನ ಜನರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂಬುದು ಪ್ರತಿಭಟನಕಾರರ ಆರೋಪವಾಗಿದೆ.