ಮನೆ ರಾಜಕೀಯ ಮತ್ತೊಮ್ಮೆ ಬಿಜೆಪಿಗೆ ಬಹುಮತದ ಅಧಿಕಾರ ನೀಡಿ: ಅಮಿತ್ ಶಾ

ಮತ್ತೊಮ್ಮೆ ಬಿಜೆಪಿಗೆ ಬಹುಮತದ ಅಧಿಕಾರ ನೀಡಿ: ಅಮಿತ್ ಶಾ

0

ಮಂಡ್ಯ(Mandya): ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಬಹುಮತದ ಅಧಿಕಾರ ನೀಡುವ ಮೂಲಕ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.

ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್- ಜೆಡಿಎಸ್ ಅನ್ನು ಕಟುಮಾತುಗಳಿಂದ ಟೀಕಿಸಿದ‌ ಶಾ, ಮಂಡ್ಯದಿಂದಲೇ ಬಿಜೆಪಿಯ‌ ವಿಜಯ ಯಾತ್ರೆ ಆರಂಭವಾಗಲು‌ ಬಹುಮತವನ್ನು ಕೊಡಿ ಎಂದು ಕೋರಿದರು.

ಭ್ರಷ್ಟಾಚಾರ, ಕುಟುಂಬ ರಾಜಕಾರಣಕ್ಕೆ ಆದ್ಯತೆ ಮತ್ತು ಕ್ರಿಮಿನಲ್ ಗಳಿಗೆ ಆಶ್ರಯ ನೀಡಿರುವುದನ್ನು ಬಿಟ್ಟರೆ, ಮಂಡ್ಯ, ಮೈಸೂರು ಭಾಗದ‌ ಅಭಿವೃದ್ಧಿಗೆ ಕಾಂಗ್ರೆಸ್, ಜೆಡಿಎಸ್ ಏನೇನೂ ಮಾಡಿಲ್ಲ.‌ ದಲಿತರು, ಬಡವರು, ಆದಿವಾಸಿಗಳನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ದೂರಿದರು‌.

ದೇಶದಲ್ಲಿ ಮೊದಲು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಲಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿತ್ತು. ಎರಡನೇ ಬಾರಿಗೂ ದಲಿತ, ಆದಿವಾಸಿ ಸಮುದಾದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿತು ಎಂದರು.

ದಲಿತರು,‌ಆದಿವಾಸಿಗಳು,‌ಬಡವರ ಅಭಿವೃದ್ಧಿಗಾಗಿ ಬಿಜೆಪಿ ಬಹಳಷ್ಟು ಕೆಲಸ ಮಾಡಿದೆ. ಬೆಟ್ಟ ಕುರುಬ, ಕುರುಬರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ ಎಂದರು.

ಬಾಬರ್ ಕಾಲದಿಂದಲೂ ರಾಮಮಂದಿರ ನಿರ್ಮಾಣ ಆಗಿರಲಿಲ್ಲ.‌ ಈಗ ನಾವು ಮಾಡುತ್ತಿಲ್ಲವೇ? 2024ರಲ್ಲಿ ಮಂದಿರ ಉದ್ಘಾಟನೆಯಾಗಲಿದೆ. ಅದೇ ರೀತಿ, ಕೇದಾರನಾಥ, ಬದರಿನಾಥ ಮತ್ತು ಕಾಶಿ ಕ್ಷೇತ್ರದ ಅಭಿವೃದ್ಧಿಗೂ ಮೋದಿ ಆದ್ಯತೆ ನೀಡಿದ್ದಾರೆ ಎಂದರು.

ದೇಶದ ಕೋಟ್ಯಂತರ ಜನರಿಗೆ ಕೋವಿಡ್ ಲಸಿಕೆ ದೊರಕಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಕೋವಿಡ್ ಮುಕ್ತಗೊಳಿಸಿದ್ದಾರೆ ಎಂದು ಹೇಳಿದರು.