ಮನೆ ಮನರಂಜನೆ ಸಿನಿಮಾ ವಿಮರ್ಶೆ: “ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’

ಸಿನಿಮಾ ವಿಮರ್ಶೆ: “ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’

0

ಆತ ಸಮಾಜದ ದೃಷ್ಟಿಯಲ್ಲಿ ಒಬ್ಬ ಕ್ರಿಮಿನಲ್‌. ಮರಣದಂಡನೆ ಶಿಕ್ಷೆಗೆ ಗುರಿಯಾಗುವಂಥ ಗುರುತರ ಆರೋಪ ಅವನ ಮೇಲಿದೆ. ಆದರೆ, ಇಡೀ ಜಗತ್ತಿನ ಕಣ್ಣಿಗೇ ಪರಮ ಪಾಪಿಯಂತೆ ಕಾಣುವ ಆತ ಆಂತರ್ಯದಲ್ಲಿ ಮಗುವಿನ ಮನಸ್ಸಿನಷ್ಟೇ ಪಾಪದ ಮುಗ್ಧ ಹುಡುಗ. ಅತಿಯಾದ ಒಳ್ಳೆಯತನ ಮತ್ತು ಮುಗ್ಧತೆಯನ್ನು ಸುತ್ತಲಿನ ಸಮಾಜ ಹೇಗೆ ಆಪೋಶನ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಆತ ಒಂದು ಉದಾಹರಣೆ.

ಅಂಥದ್ದೊಂದು ಉದಾಹರಣೆಗೆ ದೃಶ್ಯರೂಪ ಕೊಟ್ಟು ಭಾವನಾತ್ಮಕ ತೆರೆಗೆ ತರಲಾಗಿರುವ ಚಿತ್ರ “ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’ ಸಿನಿಮಾದ ಟೈಟಲ್ಲೇ ಹೇಳುವಂತೆ, “ಜಮಾಲಿಗುಡ್ಡ’ಕ್ಕೆ ಬರುವ ಹುಡುಗಿಯೊಬ್ಬಳು ತನ್ನ ಒಂದು ಕಾಲದಲ್ಲಿ ತಾನು ಅಲ್ಲಿ ಕಂಡ ಘಟನೆಗಳನ್ನು ಮೆಲುಕು ಹಾಕುವುದರ ಮೂಲಕ ಸಿನಿಮಾದ ಕಥೆ ಆರಂಭವಾಗುತ್ತದೆ. ಮಾಡದ ತಪ್ಪಿಗೆ ಜೈಲು ಶಿಕ್ಷೆಗೆ ಗುರಿಯಾಗುವ ಹೀರೊಶಿಮಾ (ಧನಂಜಯ) ತನ್ನ ಸ್ನೇಹಿತ ನಾಗಾಸಾಕಿ (ಯಶ್‌ ಶೆಟ್ಟಿ) ಜೊತೆಗೆ ಜೈಲಿನಿಂದ ಪರಾರಿಯಾಗುತ್ತಾನೆ. ಹೀಗೆ ಪರಾರಿಯಾಗುವ ವೇಳೆ ಪುಟ್ಟ ಹುಡುಗಿಯೊಬ್ಬಳು ಇವರಿಬ್ಬರಿಗೆ ಜೊತೆಯಾಗುತ್ತಾಳೆ. ಈ ಮೂವರ ಜರ್ನಿ ಹೇಗಿರುತ್ತದೆ,

ಎಲ್ಲಿಗೆ ಅಂತ್ಯವಾಗುತ್ತದೆ ಎಂಬುದೇ “ಜಮಾಲಿಗುಡ್ಡ’ ಸಿನಿಮಾದ ಕಥೆಯ ಸಣ್ಣ ಎಳೆ. ಓರ್ವ ಮುಗ್ಧ ಯುವಕ ಮತ್ತೂಬ್ಬಳು ಪುಟ್ಟ ಹುಡುಗಿ. ಇವರಿಬ್ಬರ ನಡುವಿನ ಭಾವನಾತ್ಮಕ ಪ್ರಯಾಣವೇ “ಜಮಾಲಿಗುಡ್ಡ’ ಸಿನಿಮಾದ ಹೈಲೈಟ್ಸ್‌.

ಮೊದಲರ್ಧ ಜರ್ನಿಯಲ್ಲೇ ಸಿನಿಮಾದ ಕಥೆ ಸಾಗಿದರೆ, ದ್ವಿತೀಯರ್ಧದಲ್ಲೊಂದು ಲವ್‌ಸ್ಟೋರಿ ತೆರೆದುಕೊಳ್ಳುತ್ತದೆ. ಜರ್ನಿ ಅಲ್ಲಲ್ಲಿ ಕೊಂಚ ನಿಧಾನವೆನಿಸಿದರೂ, ಸಮಾಧಾನದಿಂದ ಕೂತರೆ ಅಲ್ಲೊಂದು ಮನಮುಟ್ಟುವ ಅನುಭವವಾಗುತ್ತದೆ. ಒಂದು ಸರಳ ಕಥೆಯನ್ನು ಇಟ್ಟುಕೊಂಡು ಫೀಲ್‌ ಗುಡ್‌ ಸಿನಿಮಾ ಕಟ್ಟಿಕೊಡುವಲ್ಲಿ ಚಿತ್ರತಂಡ ಬಹುತೇಕ ಯಶಸ್ವಿಯಾಗಿದೆ.

ಇನ್ನು ತಮ್ಮ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನ ಪಾತ್ರದಲ್ಲಿ ಧನಂಜಯ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ನಾಯಕಿ ಅದಿತಿ ಪ್ರಭುದೇವ, ಯಶ್‌ ಶೆಟ್ಟಿ, ಬೇಬಿ ಪ್ರಾಣ್ಯ, ತೆರೆಮೇಲೆ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ. ಪ್ರಕಾಶ್‌ ಬೆಳವಾಡಿ, ನಂದಗೋಪಾಲ್‌ ಅವರದ್ದು ಅಚ್ಚುಕಟ್ಟು ಅಭಿನಯ. ಇತರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಗುನುಗುಡುವ ಎರಡು ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ ತಾಂತ್ರಿಕವಾಗಿ ತೆರೆಮೇಲೆ ಗಮನ ಸೆಳೆಯುವಂತಿದೆ. ಅತಿಯಾದ ಅಬ್ಬರ ಬಯಸದೇ, ನಿಧಾನವಾಗಿ ಆಸ್ವಾಧಿಸುವವರು ಥಿಯೇಟರ್‌’ನಲ್ಲಿ ಒಮ್ಮೆ “ಜಮಾಲಿಗುಡ್ಡ’ಕ್ಕೆ ಮುಖ ಮಾಡಬಹುದು.