ಮನೆ ರಾಜ್ಯ ‘ಸಾಂಬಶಿವ ಪ್ರಹಸನ’ ನಾಟಕದಲ್ಲಿ ಸಿದ್ದರಾಮಯ್ಯ ಅವರ ಅವಹೇಳನ: ದೂರು ದಾಖಲು

‘ಸಾಂಬಶಿವ ಪ್ರಹಸನ’ ನಾಟಕದಲ್ಲಿ ಸಿದ್ದರಾಮಯ್ಯ ಅವರ ಅವಹೇಳನ: ದೂರು ದಾಖಲು

0

ಮೈಸೂರು(Mysore): ರಂಗಾಯಣದಲ್ಲಿ ಶನಿವಾರ ನಡೆದ ‘ಸಾಂಬಶಿವ ಪ್ರಹಸನ’ ನಾಟಕ ಪ್ರದರ್ಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ರಂಗಾಯಣದ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳ ವಿರುದ್ಧ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ.

ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಪ್ರದರ್ಶಿಸುತ್ತಿದ್ದರು.

ಆ ವೇಳೆ, ಮೋಹನ್‌ ಎನ್ನುವವರು ಪ್ರದರ್ಶನದ ವೇಳೆಯೇ ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದ್ದರು.

ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ ಎಂದೆಲ್ಲ ಹೇಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡುತ್ತಿದ್ದೀರಿ. ಮೂಲ ನಾಟಕದಲ್ಲಿ ಹೀಗಿದೆಯೇ? ದುರುದ್ದೇಶಪೂರ್ವಕವಾಗಿ ನಾಟಕ ರೂಪಿಸಿದ್ದೀರಿ ಎಂದು ವೇದಿಕೆಗೇರಿ ಕಿಡಿಕಾರಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ‘ಕೆ.ಡಿ.ಅಂಕಲ್‌’ ಎಂದು ವ್ಯಂಗ್ಯ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾಟಕ ತಂಡದಲ್ಲಿದ್ದ 18 ಮಂದಿ ವಿರುದ್ಧ ಭಾನುವಾರ ದೂರು ನೀಡಿದ್ದೇನೆ. ಚುನಾವಣೆ ಸಮೀಪಿಸುತ್ತಿರುವುದರಿಂದಾಗಿ, ಸಿದ್ದರಾಮಯ್ಯ ಅವರನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ ಎಂದು ಬಿ.ಸುಬ್ರಹ್ಮಣ್ಯ ತಿಳಿಸಿದರು.