ಗ್ವಾಲಿಯರ್ (ಮಧ್ಯಪ್ರದೇಶ): ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ತನ್ನ ಪ್ರಿಯಕರನೊಡನೆ ಸೇರಿ ಮಗಳೇ ತಾಯಿಯನ್ನು ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮೃತ ಮಹಿಳೆ ಬಿಂದ್ ಜಿಲ್ಲೆಯ ಹಾಜಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಗಾಡಿಯಾಪುರ್‌ದವರು ಎಂದು ತಿಳಿದು ಬಂದಿದೆ.
ಗ್ವಾಲಿಯರ್ ನಗರದಲ್ಲಿ 38 ವರ್ಷದ ಮಹಿಳೆಯನ್ನು 17 ವರ್ಷದ ಅಪ್ರಾಪ್ತ ಮಗಳು ಹಾಗೂ ಆಕೆಯ 25 ವರ್ಷದ ಪ್ರಿಯಕರ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕು ಬಳಸಿ ಹತ್ಯೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಮಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಗ್ವಾಲಿಯರ್ ಎಸ್‌ಪಿ ಅಮಿತ್ ಸಂಘಿ ತಿಳಿಸಿದ್ದಾರೆ.
ಬಾಲಕಿ ಹಾಗೂ ಯುವಕನಿಗೆ ಪ್ರೇಮ ಸಂಬಂಧವಿತ್ತು. ಇದಕ್ಕೆ ಬಾಲಕಿ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ಮೂರು ತಿಂಗಳ ಹಿಂದೆ ಇಬ್ಬರೂ ಓಡಿ ಹೋಗಿದ್ದರು. ನಂತರ ಬಾಲಕಿಯನ್ನು ಪತ್ತೆ ಹಚ್ಚಿ ತಾಯಿ ಬಳಿ ಕಳಿಸಲಾಗಿತ್ತು. ಆರೋಪಿ ಯುವಕ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.














