ನ್ಯಾಯಮೂರ್ತಿಗಳ ನೇಮಕಾತಿಗಾಗಿ ಹೈಕೋರ್ಟ್ ಕೊಲಿಜಿಯಂ ಇತ್ತೀಚೆಗೆ ಮಾಡಿದ್ದ ಶಿಫಾರಸುಗಳಿಗೆ ತೆಲಂಗಾಣ ಹೈಕೋರ್ಟ್ ವಕೀಲರ ಸಂಘ (ಟಿಎಚ್’ಸಿಎಎ) ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ.. ಇದೇ ವೇಳೆ ಸಾಂವಿಧಾನಿಕ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಸ್ವಜನಪಕ್ಷಪಾತ ಮತ್ತು ಮನಸೋಇಚ್ಛೆಯ ವರ್ತನೆಗೆ ಕಾರಣವಾಗುವ ಕೊಲಿಜಿಯಂ ವ್ಯವಸ್ಥೆ ರದ್ದುಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡುವ ನಿರ್ಣಯವನ್ನು ಅದು ಅಂಗೀಕರಿಸಿದೆ.
ನ್ಯಾಯಮೂರ್ತಿಗಳ ನೇಮಕಕ್ಕೆ ತೆಲಂಗಾಣ ಹೈಕೋರ್ಟ್’ನ ಕೊಲಿಜಿಯಂ ಮಾಡಿರುವ ಶಿಫಾರಸ್ಸಿನ ಬಗ್ಗೆ ವಕೀಲರು ಸಂಘದ ಮಹಾಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಟಿಎಚ್ಸಿಎಎ ಅಧ್ಯಕ್ಷ ವಿ ರಘುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಶಿಫಾರಸು ಮಾಡಿದ ಹೆಸರುಗಳ ಸಮಿತಿಯಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಹಾಗೂ ಸಾಮಾಜಿಕ ನ್ಯಾಯದ ಕೊರತೆ ಇರುವುದನ್ನು ದೂರಿ ವಕೀಲರ ಸಂಘದ ಸದಸ್ಯರು ಸಂಘಕ್ಕೆ ಹಲವು ಪತ್ರ ಬರೆದಿದ್ದಾರೆ” ಎಂದು ಅದರಲ್ಲಿ ವಿವರಿಸಲಾಗಿದೆ.
ಶಿಫಾರಸು ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವುದಿಲ್ಲ. ಜೊತೆಗೆ ಅರ್ಹ ಮತ್ತು ಪ್ರತಿಭಾವಂತ ವಕೀಲರ ಬದಲಿಗೆ ಹೊರಗಿನವರನ್ನು ಶಿಫಾರಸು ಮಾಡಿರುವುದನ್ನು ವಿರೋಧಿಸಲು ವಿಸ್ತೃತ ಮತ್ತು ವ್ಯಾಪಕ ಚರ್ಚೆಯ ಬಳಿಕ ಸಂಘ ಸರ್ವಾನುಮತದ ನಿರ್ಣಯ ಕೈಗೊಂಡಿರುವುದಾಗಿ ಮಾಹಿತಿ ನೀಡಲಾಗಿದೆ.
ಶಿಫಾರಸುಗಳನ್ನು ಹಿಂಪಡೆಯಬೇಕು ಮತ್ತು ವಕೀಲರ ಸಂಘವನ್ನು ಒಳಗೊಳ್ಳುವ ಸಮಾಲೋಚನಾ ಪ್ರಕ್ರಿಯೆಯ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಅನ್ವಯ ಹೊಸ ಶಿಫಾರಸು ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಒಂದು ವೇಳೆ ಶಿಫಾರಸು ಹಿಂಪಡೆಯದಿದ್ದರೆ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿಯೂ ಅದು ಎಚ್ಚರಿಸಿದೆ.















