ವಿಜಯಪುರ(Vijayapura): ಅನಾರೋಗ್ಯದಿಂದ ಬಳಲುತ್ತಿರುವ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪಾರಾಗುತ್ತಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಶ್ರೀ ಗಳ ಹೆಲ್ತ್ ಬುಲೆಟಿನ್ ನೀಡಿದ ವೈದ್ಯರಾದ ಡಾ. ಮೂಲಿಮನಿ, ಡಾ. ಎಸ್.ಬಿ.ಪಾಟೀಲ, ಡಾ.ಸೋಮಶೇಖರ್, ಶ್ರೀಗಳ ಉಸಿರಾಟ, ನಾಡಿಮಿಡಿತ ಕ್ಷಣ ಕ್ಷಣಕ್ಕೆ ಕಡಿಮೆಯಾಗತೊಡಗಿದೆ. ಆಕ್ಸಿಜನ್ ಮೇಲೆ ಇದ್ದಾರೆ ಎಂದರು.
ಶ್ರೀಗಳು ಬೆಳಿಗ್ಗೆ ಗಂಜಿ ಸೇವಿಸಿದ್ದರು. ಬಳಿಕ ಇದುವರೆಗೆ ಏನನ್ನೂ ಸೇವಿಸಿಲ್ಲ ಎಂದಿದ್ದಾರೆ.
ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಅನಾರೋಗ್ಯದಿಂದ ನಿತ್ರಾಣವಾಗಿರುವ ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕರಾದ ಯಶವಂತ ರಾಯಗೌಡ ಪಾಟೀಲ, ಶಿವಾನಂದ ಪಾಟೀಲ ಮತ್ತು ಕಾಂಗ್ರೆಸ್ ಮುಖಂಡರು ಭೇಟಿಯಾಗಿ, ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆ ಮಾತನಾಡಿರುವೆ. ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಶ್ರೀಗಳು ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಸಿದ್ದೇಶ್ವರ ಶ್ರೀಗಳು ದೊಡ್ಡ ಧಾರ್ಮಿಕ ಸಂತ, ಅವರು ಪ್ರವಚನದ ಮೂಲಕ ಜನರಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದವರು. ಧರ್ಮ ಎಂಬುದು ಜೀವನ ಮಾರ್ಗ, ಮನುಷ್ಯನ ಒಳಿತಿಗೆ ಸಹಕಾರಿ ಎಂದು ಜನತೆಗೆ ತಿಳಿಸುತ್ತಿದ್ದರು. ಜಾತ್ಯತೀತ ನಿಲುವುಳ್ಳವರಾಗಿದ್ದಾರೆ, ಆಳವಾದ ಜ್ಞಾನ ಹೊಂದಿದ್ದಾರೆ ಎಂದು ಶ್ಲಾಘಿಸಿದರು.