ಮನೆ ರಾಜಕೀಯ ಸಂಕ್ರಾಂತಿ ನಂತರ ಜೆಡಿಎಸ್’ನ 2ನೇ ಪಟ್ಟಿ ಬಿಡುಗಡೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಸಂಕ್ರಾಂತಿ ನಂತರ ಜೆಡಿಎಸ್’ನ 2ನೇ ಪಟ್ಟಿ ಬಿಡುಗಡೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

0

ಮೈಸೂರು(Mysuru): ಸಂಕ್ರಾಂತಿ ಹಬ್ಬದ ನಂತರ ಜೆಡಿಎಸ್‌’ನ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್‌’ನಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಕೃಷ್ಣರಾಜ ವಿಧಾನಸಭಾ‌ ಕ್ಷೇತ್ರದ ‘ಶರಣರೊಂದಿಗೆ ಕುಮಾರಣ್ಣ’ ಕಾರ್ಯಕ್ರಮದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಜ.2ರಂದು ಪಕ್ಷದ ಪ್ರಮುಖರ ಸಭೆ ನಡೆಸಿದ್ದೇನೆ ಎಂದರು.

ಜೆಡಿಎಸ್ ರಾಜ್ಯದ ಆರೂವರೆ ಕೋಟಿ ಜನರ ಎಟಿಎಂ:

ಜಾತ್ಯಾತೀತ ಜನತಾದಳ ಪಕ್ಷವು ರಾಜ್ಯದ ಆರೂವರೆ ಕೋಟಿ ಜನರ ಎಟಿಎಂ  ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಿರುಗೇಟು ನೀಡಿದರು.

ಜೆಡಿಎಸ್‌ ಕುರಿತಂತೆ ಸಾರ್ವಜನಿಕವಾಗಿ ಟೀಕಿಸಿರುವ ಅಮಿತ್‌ ಶಾ ಅವರಿಗೆ ಟ್ವೀಟ್‌ ಮುಖಾಂತರ ಕೆಲವು ಪ್ರಶ್ನೆಗಳನ್ನು ಕೇಳಿದ್ದೆನು. ಅದಕ್ಕೆ ಉತ್ತರಿಸುವ ಧೈರ್ಯ ಮಾಡಲಿಲ್ಲ. ದೇವೇಗೌಡರ ಕುಟುಂಬವು ನಾಡಿನ ಸಂಪತ್ತಿನ ಲೂಟಿ ಮಾಡಿದ ಒಂದೇ ಒಂದು ನಿದರ್ಶನವಿದ್ದರೂ ಕೂಡ, ರಾಜ್ಯದ ಜನರ ಮುಂದೆ ದಾಖಲೆಗಳನ್ನು ಮುಂದಿಡುವ ಕೆಲಸ ಮಾಡಬೇಕು ಎಂದು ಈ ವೇಳೆ ಸವಾಲು ಎಸೆದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರ, ಜೆಡಿಎಸ್‌ ಕುರಿತಂತೆ ಟೀಕಿಸಲು ಯಾವ ನೈತಿಕತೆ ಉಳಿಸಿಕೊಂಡಿದೆ’ ಎಂದು ಈ ವೇಳೆ ಆಕ್ರೋಶ ಹೊರಹಾಕಿದರು.ಮಂಡ್ಯದಲ್ಲಿ ಇತ್ತೀಚಿಗೆ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಜೆಡಿಎಸ್ ಪಕ್ಷವನ್ನು ಕುಟುಂಬದ ಎಟಿಎಂ’ ಎಂದು ಟೀಕಿಸಿದ್ದರು.

ಬಿಎಸ್‌’ವೈ ಮೂಲೆಗುಂಪು: ರಾಜ್ಯದಲ್ಲಿ ಬಿಜೆಪಿ ಉಳಿದಿರುವುದೇ ವೀರಶೈವ ಲಿಂಗಾಯತ ಹಾಗೂ ಬಿ.ಎಸ್.ಯಡಿಯೂರಪ್ಪ‌ ಶಕ್ತಿಯಿಂದ. ಈಗ ಅವರೇ ಆ ಪಕ್ಷದಲ್ಲಿ‌ ಮೂಲೆಗುಂಪಾಗಿದ್ದಾರೆ ಎಂದ ಎಚ್‌’ಡಿಕೆ, ಆ ಸಮಾಜಕ್ಕೆ ಬಿಜೆಪಿ‌ ಕೊಟ್ಟಿರುವ ಕೊಡುಗೆ ಏನು? ಬಿ.ಎಸ್.ಯಡಿಯೂರಪ್ಪ ‌ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಧಾನಮಂತ್ರಿ ಎಷ್ಟು ಸಲ ಭೇಟಿಗೆ ಅವಕಾಶ‌ ನೀಡಿದ್ದರು. ಬೊಮ್ಮಾಯಿ ಅವರನ್ನು ಅವರ ಪಕ್ಷದ ನಾಯಕರು ಹೇಗೆ‌ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ಸಮುದಾಯದ ಮುಖಂಡರಿಗೆ ಈ ವೇಳೆ ಪ್ರಶ್ನಿಸಿದರು.

ಇದಕ್ಕೂ ಮುನ್ನ ಪಕ್ಷದ ಸಮಾವೇಶದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಹಾಗೂ‌ ಪತನದ ಕುರಿತಂತೆ ಸುದೀರ್ಘವಾಗಿ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ‌.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡರಾದ ಎಚ್.ಕೆ.ರಾಮು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಲ್ಲೇಶ್ ಇದ್ದರು.