ಕನ್ನಡ ಚಿತ್ರರಂಗದಲ್ಲಿ “ರಾಜ್ ಕುಮಾರ’, “ಕೆಜಿಎಫ್’, “ಕೆಜಿಎಫ್-2′, “ಕಾಂತಾರ’ ಹೀಗೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಸಂಸ್ಥೆ ಮುಂದಿನ 5 ವರ್ಷಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಹೂಡಲು ನಿರ್ಧರಿಸಿದೆ.
ಮನರಂಜನಾ ವಲಯದ ಸುಸ್ಥಿರ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷ ₹3,000 ಕೋಟಿ ಹೂಡಿಕೆ ಮಾಡುವುದಾಗಿ ಹೊಂಬಾಳೆ ಗ್ರೂಪ್ ಸಂಸ್ಥಾಪಕ ವಿಜಯ್ ಕಿರಗಂದೂರು ಸೋಮವಾರ ಘೋಷಿಸಿದ್ದಾರೆ.
ಅವರ ಟ್ವೀಟ್ ಹೀಗಿದೆ: “ಚಿತ್ರ ಪ್ರೇಮಿಗಳ ಪ್ರೀತಿ ಮತ್ತು ಪ್ರೋತ್ಸಾಹದ ಫಲವಾಗಿ ಹೊಂಬಾಳೆ ಫಿಲಂಸ್ ಅತ್ಯಂತ ಯಶಸ್ವಿ ಚಲನಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಯಶಸ್ವಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದೇವೆ’ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
“ಅದರ ಭಾಗವಾಗಿ ಮುಂದಿನ 5 ವರ್ಷದಲ್ಲಿ ಮನರಂಜನಾ ಕ್ಷೇತ್ರದಲ್ಲಿ 3 ಸಾವಿರ ಕೋಟಿ ಹೂಡಲು ಯೋಜನೆ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ. ಹೊಂಬಾಳೆ ಫಿಲಂಸ್ ಸಂಸ್ಥೆ ಇಂದು ದೇಶದ ಪ್ರತಿಷ್ಠಿತ ಚಿತ್ರ ನಿರ್ಮಾಣ ಎಂಬ ಹೆಗ್ಗಳಿಕೆ ಪಡೆದಿರುವುದು ಚಿತ್ರ ಪ್ರೇಮಿಗಳ ಬೆಂಬಲದಿಂದ’ ಎಂದು ವಿಜಯ್ ಎಂದು ವಿಜಯ್ ಹೇಳಿದ್ದಾರೆ.
ನಾಡಿನ ಇತಿಹಾಸ, ಪರಂಪರೆ, ಕಲೆ-ಸಂಸ್ಕೃತಿ, ಮತ್ತು ಸಂಪ್ರದಾಯಗಳನ್ನು ವಿಶ್ವಕ್ಕೆ ಪರಿಚಯಿಸುವ ಇನ್ನಷ್ಟು ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸಿ ನಾಡಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.
“ಇಂದು ಮನರಂಜನಾ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದ್ದು ನಮ್ಮ ದೇಶದಲ್ಲಿ ವೈವಿಧ್ಯಮಯ ಗುಣಮಟ್ಟದ ಚಿತ್ರ ನಿರ್ಮಾಣಕ್ಕೆ ವಿಫುಲ ಅವಕಾಶವಿದೆ. ದೇಶದ ಯುವಪೀಳಿಗೆಯನ್ನು ಜಾಗೃತಗೊಳಿಸುವ ಮತ್ತು ಹೆಚ್ಚು ಪ್ರೋತ್ಸಾಹಿಸುವ ಸಲುವಾಗಿ ಮನರಂಜನಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸೇವೆ ಮಾಡಲು ನಾವು ಉದ್ದೇಶಿಸಿದ್ದೇವೆ’ ಎಂದು ಹೇಳಿದ್ದಾರೆ.
“ನಾಡಿನ ಜನತೆ ಹೊಂಬಾಳೆ ಫಿಲಮ್ಸ್ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗಳನ್ನು ಹುಸಿಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದು, ಇನ್ನಷ್ಟು ಹೊಸತನದ ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಮೂಲಕ ಮನರಂಜನಾ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ’ ಎಂದಿದ್ದಾರೆ ವಿಜಯ್.