ಮನೆ ರಾಜಕೀಯ ನಾನೇನು ತನಿಖೆ ಅಧಿಕಾರಿಯಲ್ಲ, ನೀವು ತನಿಖಾ ಅಧಿಕಾರಿಯೂ ಅಲ್ಲ: ಸ್ಯಾಂಟ್ರೋ ರವಿ ಕುರಿತ ಮಾದ್ಯಮವರ ಪ್ರಶ್ನೆಗೆ...

ನಾನೇನು ತನಿಖೆ ಅಧಿಕಾರಿಯಲ್ಲ, ನೀವು ತನಿಖಾ ಅಧಿಕಾರಿಯೂ ಅಲ್ಲ: ಸ್ಯಾಂಟ್ರೋ ರವಿ ಕುರಿತ ಮಾದ್ಯಮವರ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಕಿಡಿ

0

ಮೈಸೂರು(Mysuru): ಸ್ಯಾಂಟ್ರೋ ರವಿ ಕುರಿತಾದ ಪರ್ತಕರ್ತರ ಹಲವು ಪ್ರಶ್ನೆಯಿಂದ ವಿಚಲಿತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾನೇನು ತನಿಖೆ ಅಧಿಕಾರಿಯಲ್ಲ, ನೀವು ತನಿಖಾ ಅಧಿಕಾರಿಯೂ ಅಲ್ಲ ಎಂದು ಪತ್ರಕರ್ತರ ವಿರುದ್ಧ ಹರಿಹಾಯ್ದರು.

ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಸಂಬಂಧ ಶನಿವಾರ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾಧ್ಯಮ ‌ಪ್ರತಿನಿಧಿಗಳ ಜೊತೆ ಮಾತನಾಡಿದರು.

ಸಮಗ್ರ ತನಿಖೆಗೆ ಸೂಚನೆ:

ಸ್ಯಾಂಟ್ರೊ ರವಿ ಮೇಲೆ ದಾಖಲಾಗಿರುವ ಪ್ರಕರಣದ‌ ಕುರಿತಂತೆ ವಿಚಾರಣೆ ನಡೆಯುತ್ತಿದ್ದು, ಆತನ ವಿರುದ್ಧ ಎಲ್ಲ ಪ್ರಕರಣಗಳನ್ನು ‌ಸಮಗ್ರ‌ ತನಿಖೆಗೆ ನಡೆಸುವಂತೆ ಮೈಸೂರು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಆತನ ಜೊತೆಗೆ ಚಿತ್ರಗಳು ಇದೆ ಎಂದ ಮಾತ್ರಕ್ಕೆ ಸಂಬಂಧ ಇದೆ ಎಂದು ಹೇಳಲು ಸಾಧ್ಯವಿಲ್ಲ. ಆತನ ವಿರುದ್ಧ ಬೇರೆ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಪುರಾವೆಗಳನ್ನು ಸಂಗ್ರಹಿಸುವಂತೆ ಪೊಲೀಸರಿಗೂ ಸೂಚಿಸಿದ್ದೇನೆ. ಆದಷ್ಟು ಶೀಘ್ರ ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

20 ವರ್ಷಗಳ ತನಕ ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ದಾಖಲಾದ ಪ್ರಕರಣ ಸೇರಿದಂತೆ, ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತದೆ. ನನ್ನ ಹಾಗೂ ಮಗನ ಜೊತೆ ಚಾಟ್ ನಡೆಸಿರುವ ಕುರಿತಂತೆ ವಾಟ್ಸ್’ಆ‍್ಯಪ್‌’ನಲ್ಲಿ ಕ್ರಿಯೇಟ್‌ ಮಾಡಿಕೊಂಡಿದ್ದಾನೆ. ತಂತ್ರಜ್ಞಾನ ಬಳಸಿಕೊಂಡು ಆ ರೀತಿ ಮಾಡಿಕೊಂಡಿರಬಹುದು. ಆತನ ಜೊತೆ ಇರುವ ಸಂಬಂಧ, ಹಣಕಾಸು ವ್ಯವಹಾರದ ವಿವರವಾದ ತನಿಖೆ ನಡೆದರೆ, ಸತ್ಯಾಂಶ ಬಯಲಾಗಲಿದೆ. ವಿಪಕ್ಷಗಳು, ವಿಪಕ್ಷ ನಾಯಕರ ಜೊತೆಗೂ ಆತನಿಗೆ ಸಂಪರ್ಕವಿದೆ. ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೊ–ವಿಡಿಯೊ ಕೂಡ ತನಿಖೆಗೆ ಒಳಪಡಲಿದೆ. ಬಚಾವ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ವಿಧಾನಸೌಧದಲ್ಲಿ ₹10 ಲಕ್ಷ ನಗದು ಪತ್ತೆಯಾಗಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಆ ಮಾನದಂಡ ತೆಗೆದುಕೊಂಡರೆ, 2019ರಲ್ಲಿ ಕಾಂಗ್ರೆಸ್‌ನ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿಯೇ ₹22 ಲಕ್ಷ ಹಣ ಪತ್ತೆಯಾಗಿತ್ತು. ಆಗಲೇ ವಿಧಾನಸೌಧ ಕಾಂಗ್ರೆಸ್‌’ನ ಭ್ರಷ್ಟಾಚಾರದ ಬ್ಯಾಂಕ್‌ ಆಗಿತ್ತು. ಆಗ ಸಚಿವರ ವಿರುದ್ಧ ತನಿಖೆ ನಡೆಸದೇ, ಹೇಳಿಕೆಯನ್ನು ಪಡೆಯಲಿಲ್ಲ. ಎಸಿಬಿ ಕೊಟ್ಟು ಪ್ರಕರಣ ಮುಚ್ಚಿಹಾಕಿದ್ದಾರೆ. ಇನ್ನೊಬ್ಬರ ಕುರಿತು ಮಾತನಾಡುವ ನೈತಿಕ ಹಕ್ಕು ಹೊಂದಿಲ್ಲ ಎಂದರು.

ಈ‌ ಬಾರಿಯ ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ಥಬ್ದಚಿತ್ರಕ್ಕೆ ಅವಕಾಶ‌ ನಿರಾಕರಿಸಿರುವ ಕುರಿತು ಮಾತನಾಡಿದ ಅವರು, ಕಳೆದ ಬಾರಿ ರಾಜ್ಯದ ಸ್ಥಬ್ದಚಿತ್ರಕ್ಕೆ ಪ್ರಶಸ್ತಿ ಬಂದಿತ್ತು, ಈ‌ ಬಾರಿಯೂ ಅವಕಾಶ‌ ನೀಡುವ ಕುರಿತಂತೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತುಕತೆ‌ ನಡೆಸಿದ್ದು, ಅವಕಾಶ ‌ಸಿಗುವ ನಿರೀಕ್ಷೆಯಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕರಾದ ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್‌, ಹರ್ಷವರ್ಧನ್‌, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ಮೇಯರ್‌ ಶಿವಕುಮಾರ್‌, ಉಪಮೇಯರ್‌ ಡಾ. ರೂಪಾ ಇದ್ದರು.