ಮನೆ ರಾಜ್ಯ ರಾಷ್ಟ್ರೀಯ ಯುವ ಜನೋತ್ಸವ: ಲಕ್ಷ ಜನರಿಗೆ ಉಣಬಡಿಸಲು 600 ಬಾಣಸಿಗರ ಸಿದ್ದತೆ

ರಾಷ್ಟ್ರೀಯ ಯುವ ಜನೋತ್ಸವ: ಲಕ್ಷ ಜನರಿಗೆ ಉಣಬಡಿಸಲು 600 ಬಾಣಸಿಗರ ಸಿದ್ದತೆ

0

ಧಾರವಾಡ: ರಾಷ್ಟ್ರೀಯ ಯುವಜನೋತ್ಸವದಲ್ಲಿ ಒಂದು ಲಕ್ಷ ಜನರಿಗೆ ಉತ್ತರ ಕರ್ನಾಟಕ ಶೈಲಿ ಹಾಗೂ ದೇಶದ ವಿವಿಧ ಪ್ರದೇಶಗಳ ಭಕ್ಷ್ಯಭೋಜನಗಳನ್ನು ಉಣಬಡಿಸಲು 600 ಬಾಣಸಿಗರು ಸಿದ್ಧತೆ ಆರಂಭಿಸಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿನ ಐದು ಎಕರೆ ಪ್ರದೇಶದಲ್ಲಿ ಆಹಾರ ಸಿದ್ಧತೆ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿತು. ಸುಮಾರು 12 ಲಾರಿಗಳಲ್ಲಿ ಅಡುಗೆ ಸಾಮಗ್ರಿಗಳು ಬಂದಿಳಿದಿವೆ.

ಮುಂಜಾನೆಯ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಚಹಾ ಹಾಗೂ ರಾತ್ರಿಯ ಊಟ ಇಲ್ಲಿ ಸಿದ್ಧಗೊಳ್ಳಲಿದೆ. ಪ್ರತಿ ಹೊತ್ತಿಗೆ 7ರಿಂದ 8 ಸಾವಿರ ಪ್ರತಿನಿಧಿಗಳಿಗೆ ಇಲ್ಲಿ ಊಟೋಪಚಾರ ಸಿದ್ಧಗೊಳ್ಳಲಿದೆ. ಪ್ರತಿ ದಿನವೂ ಆಹಾರದಲ್ಲಿ ವೈವಿಧ್ಯ ಇರುವಂತೆ ಸಿದ್ಧತೆ ನಡೆದಿದೆ. ರಾತ್ರಿ ಭೋಜನದಲ್ಲಿ ಮಾತ್ರ ಮಾಂಸಾಹಾರ ಖಾದ್ಯ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಖಡಕ್ ರೊಟ್ಟಿ, ವೈವಿಧ್ಯಮಯ ಪಲ್ಯವನ್ನೊಳಗೊಂಡ ವಿಶೇಷ ಆಹಾರ ಸಿದ್ಧಪಡಿಸಲಾಗುವುದು. ಉತ್ತರ ಭಾರತ, ದಕ್ಷಿಣ ಭಾರತ ಶೈಲಿಯ ಖಾದ್ಯಗಳು ವಿಶೇಷವಾಗಿರಲಿವೆ.

ಪ್ರತಿದಿನ ಒಂದೊಂದು ರೀತಿಯ ಪಾಯಸ ಇರಲಿದ್ದು, ಅಗತ್ಯಕ್ಕೆ ತಕ್ಕಂತೆ ಆಹಾರದ ಮೆನು ಬದಲಾವಣೆಗೂ ಸಿದ್ಧರಾಗಿದ್ದಾರೆ. ಅಡುಗೆ ತಯಾರಿಸಲು ಮಲಪ್ರಭಾ ನದಿಯಿಂದ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ಉಪಾಹಾರಕ್ಕೆ ಬಾಳೆ ಹಣ್ಣು, ಕಲ್ಲಂಗಡಿ, ಬ್ರೆಡ್, ಬಟರ್, ಜಾಮ್, ಕಾರ್ನ್ ಫ್ಲೇಕ್ಸ್, ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಆಲೂ ಪರೋಟ, ಶಾವಿಗೆ ಉಪ್ಪಿಟ್ಟು, ಕಾಫಿ, ಟೀ, ಮಿನಿ ರಸ್ಕ್ ಮತ್ತು ಖಾರಿ, ಬಿಸಿ ಮತ್ತು ತಂಪಾದ ಬಾದಾಮಿ ಹಾಲು. ಮಧ್ಯಾಹ್ನ ಬೆಂಡಿ ಮಸಾಲ, ಪನ್ನೀರ್ ಮಟ್ಟರ್, ದಾಲ್ ಮಖಾನಿ, ಗೋಧಿ ರೋಟಿ/ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ಪಲಾವ್, ಅನ್ನ, ಕ್ಯಾರೇಟ್ ಹಲ್ವಾ.

ಸಂಜೆ ಹೈ ಟೀಗೆ ತರಕಾರಿ ಪಕೋಡ, ಕುಕೀಸ್, ಕಾಫಿ ಟೀ.

ರಾತ್ರಿಗೆ ಮಟನ್, ಮೇಥಿಮಟರ್ ಮಲೈ, ಪನ್ನೀರ್ ಹರಿಯಾಲಿ, ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಲಾಡ್, ಪಾಸ್ತಾ, ಟೊಮೊಟೊ ರೈಸ್, ಜಿಲೇಬಿ ರಬ್ಡಿ, ಮೀನಿನ ಖಾದ್ಯ, ಮೊಟ್ಟೆಯ ಸಾರು, ಕೋಳಿ ಖಾದ್ಯ ಇರಲಿದೆ.

ಕ್ರೀಡಾ ಸಚಿವ ನಾರಾಯಣಗೌಡ ಅವರು ಅಡುಗೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ.