ಮನೆ ರಾಜ್ಯ ಜನಶಕ್ತಿಯ ಮೂಲಕ ಮೈಸೂರಿನ ಉಸಿರಾದ ಬೆಟ್ಟ ಉಳಿಸೋಣ: ಚಾಮುಂಡಿ ಬೆಟ್ಟ ಉಳಿಸಿ ಸಮಿತಿ

ಜನಶಕ್ತಿಯ ಮೂಲಕ ಮೈಸೂರಿನ ಉಸಿರಾದ ಬೆಟ್ಟ ಉಳಿಸೋಣ: ಚಾಮುಂಡಿ ಬೆಟ್ಟ ಉಳಿಸಿ ಸಮಿತಿ

0

ಮೈಸೂರು(Mysuru): ನಗರದಲ್ಲಿ ಮಂಗಳವಾರ ಪರಿಸರ ಬಳಗ, ಮೈಸೂರು ಗ್ರಾಹಕರ ಪರಿಷತ್, ಕ್ಲೀನ್ ಮೈಸೂರು ಫೌಂಡೇಶನ್, ಪರಿಸರ ಸಂರಕ್ಷಣಾ ಸಮಿತಿ, ಸಮಾನ ಮನಸ್ಕರ ವೇದಿಕೆ ಸಹಯೋಗದಲ್ಲಿ ನಡೆದ ‘ಚಾಮುಂಡಿ ಬೆಟ್ಟ ಉಳಿಸಿ’ ಸಮಿತಿಯ ಸಭೆ ನಡೆಸಲಾಯಿತು.

ಸಭೆಯಲ್ಲಿ ಜನಶಕ್ತಿಯ ಮೂಲಕ ಮೈಸೂರಿನ ಉಸಿರಾದ ಬೆಟ್ಟ ಉಳಿಸೋಣ. ಪಾದಯಾತ್ರೆ ನಡೆಸೋಣ.. ಚಾಮುಂಡಿ ಬೆಟ್ಟ ಮತ್ತೊಂದು ಜೋಶಿಮಠವಾಗಲು ಬಿಡುವುದಿಲ್ಲ. ಚಾಮಲಾಪುರ ಉಷ್ಣ ವಿದ್ಯುತ್‌ ಸ್ಥಾವರ ವಿರೋಧಿಸಿ ನಡೆಸಿದ ಹೋರಾಟವೇ ನಮ್ಮ ಮಾದರಿ ಎಂಬ ನಿರ್ಣಯಗಳನ್ನು ತೆಗೆದುಕೊಂಡರು.

ನಿವೃತ್ತ ಮೇಜರ್‌ ಜನರಲ್‌ ಸುಧೀರ್‌ ಜಿ.ಒಂಬತ್ಕೆರೆ ಮಾತನಾಡಿ, ಚಾಮಲಾಪುರ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪನೆ ತಡೆಗೆ ಹೋರಾಡಿದಂತೆಯೇ ಬೆಟ್ಟದಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಅಭಿವೃದ್ಧಿ ಚಟುವಟಿಕೆ ವಿರುದ್ಧವೂ ಜನಶಕ್ತಿ ಚಳವಳಿ ರೂಪಿಸಬೇಕು ಎಂದು ಪ್ರತಿಪಾದಿಸಿದರು.

ಜಾಗೃತಿಗಾಗಿ ಸಾಮಾಜಿಕ ಮಾಧ್ಯಮ ಬಳಸಿಕೊಂಡು, ಸ್ವಾಮೀಜಿಗಳನ್ನೂ ಸೇರಿಸಿಕೊಳ್ಳಬೇಕು. ಬೆಟ್ಟದ ಆಡಳಿತ ನಿರ್ವಹಣೆಗೆ ಪ್ರಾಧಿಕಾರ ರಚನೆಯಾಗಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗೆ ಸಲ್ಲಿಸಿರುವ ಕರಡು ಅನುಮೋದನೆಗೂ ಸತ್ಯಾಗ್ರಹ ನಡೆಸಬೇಕು ಎಂದರು.

ಪರಿಸರವಾದಿ ಭಾಮಿ ವಿ.ಶೆಣೈ, ಉತ್ತರಾಖಂಡದಲ್ಲಿ ಜೋಶಿಮಠ ಪಟ್ಟಣವೇ ಬೆಟ್ಟದಿಂದ ಕಣಿವೆಗೆ ಜಾರುತ್ತಿರುವುದನ್ನು ನೆನಪಿನಲ್ಲಿರಿ ಸಿಕೊಂಡೇ ಸತ್ಯಾಗ್ರಹ ನಡೆಸಬೇಕು ಎಂದರು.

ಲೇಖಕಿ ಕುಸುಮಾ ಆಯರಹಳ್ಳಿ, ಬೆಟ್ಟದ ಉಳಿವಿಗೆ ಪಾದಯಾತ್ರೆಯೇ ಸೂಕ್ತ. 10 ದಿನದಲ್ಲಿ ಮನವಿ ಸಲ್ಲಿಸೋಣ. ಸ್ಪಂದಿಸದಿದ್ದರೆ ಪಾದಯಾತ್ರೆ ನಡೆಸೋಣ ಎಂದರು.

ಪ್ರೊ.ಕಾಳೇಗೌಡ ನಾಗವಾರ, ಮುಂಬೈ ವಿಶ್ವವಿದ್ಯಾಲಯದಲ್ಲಿರುವ ಜೀವವೈವಿಧ್ಯ ತಾಣದಂತೆಯೇ ಪರಿಸರ ಕೇಂದ್ರಿತ ಅಭಿವೃದ್ಧಿ ಮಾದರಿ ಬೆಟ್ಟಕ್ಕೆ ಬೇಕಿದೆ ಎಂದರು.

ಮಾಜಿ ಮೇಯರ್‌ ಭೈರಪ್ಪ, ಅಹಿಂದ ಜವರಪ್ಪ ಮಾತನಾಡಿ, ಬೆಟ್ಟದ ಕೆಳಗೆ ನಡೆಯುತ್ತಿರುವ ಚಟುವಟಿಕೆಗಳನ್ನೂ ನಿಯಂತ್ರಿಸಿ, ಬಫರ್ ವಲಯವೆಂದು ಘೋಷಿಸಬೇಕು ಎಂದರು.

ಪರಿಸರವಾದಿ ಭಾನು ಮೋಹನ್, ಇತಿಹಾಸ ತಜ್ಞ ಎನ್‌.ಎಸ್‌.ರಂಗರಾಜು, ಪ್ರೊ.ಕಾಳಚನ್ನೇಗೌಡ, ಲೀಲಾ ಶಿವಕುಮಾರ್, ಮುಖಂಡ ನವೀನ್ ಕುಮಾರ್‌ ಇದ್ದರು.

ಅಭಿವೃದ್ಧಿ ಹೆಸರಲ್ಲಿ ಪರಿಸರಕ್ಕೆ ಧಕ್ಕೆ: ಸಮಿತಿಯ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ, ‘ಬೆಟ್ಟದ ಧಾರ್ಮಿಕ ಪಾವಿತ್ರ್ಯ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬರದಂತೆ ಅಭಿವೃದ್ಧಿ ನಡೆಸಬೇಕು. ಆದರೆ, ಎಲ್ಲವನ್ನೂ ಉಲ್ಲಂಘಿಸಲಾಗುತ್ತಿದೆ ಎಂದು ದೂರಿದರು.

ಪರಿಸರ ತಜ್ಞ ‌‌ಯು.ಎನ್‌.ರವಿಕುಮಾರ್, ಪ್ರಸಾದ್‌ ಯೋಜನೆಯಡಿ ಅಭಿವೃದ್ಧಿ ಯೋಜನೆಗಳನ್ನು ಪರಿಸರ ತಜ್ಞರೊಂದಿಗೆ ಸಮಾಲೋಚಿಸಿಯೇ ನಡೆಸಬೇಕು. ಆದರೆ ಹಾಗೆ ಆಗುತ್ತಿಲ್ಲ ಎಂದರು.