ಮನೆ ಸುದ್ದಿ ಜಾಲ ಮಕ್ಕಳಿಗೆ ನೈತಿಕ ಶಿಕ್ಷಣ ಇಲ್ಲವಾಗಿದೆ: ಪ್ರೊ.ಶರಣಪ್ಪ ವಿ.ಹಲಸೆ

ಮಕ್ಕಳಿಗೆ ನೈತಿಕ ಶಿಕ್ಷಣ ಇಲ್ಲವಾಗಿದೆ: ಪ್ರೊ.ಶರಣಪ್ಪ ವಿ.ಹಲಸೆ

0

ಮೈಸೂರು(Mysuru): ಮಕ್ಕಳಿಗೆ ಇಂದು ನೈತಿಕ ಶಿಕ್ಷಣ ಇಲ್ಲವಾಗಿದೆ. ನಮ್ಮ ಪರಂಪರೆ ನಶಿಸಿ ಹೋಗುತ್ತಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.

ಇಲ್ಲಿನ ವಿಶ್ವವಿದ್ಯಾಲಯದ ‘ನಳ’ ಸಭಾಂಗಣದಲ್ಲಿ ಪ್ರಾಚೀನ ಇತಿಹಾಸ, ‍ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಿಂದ ಪುರಾತತ್ವ, ವಸ್ತುಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಸಹಯೋಗದಲ್ಲಿ ಪ್ರಾರಂಭಿಸಿರುವ ‘ಪರಂಪರೆ ಕೂಟ’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪರಂಪರೆ ಹಾಗೂ ಹಿಂದೆ ಏನೆಲ್ಲಾ ಆಗಿ ಹೋಗಿದೆ ಎಂಬುದರ ಅರಿವು ನಮಗೆ ಇರಬೇಕಾಗುತ್ತದೆ. ಈ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌’ಒಯು)ದಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹಾಲಯ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಅಗತ್ಯಬಿದ್ದರೆ ಕೇಂದ್ರ ಸರ್ಕಾರದಿಂದಲೂ ಅನುದಾನ ಪಡೆಯಬಹುದು. ಸಂಸದ ತೇಜಸ್ವಿ ಸೂರ್ಯ ಜತೆಗೂ ಚರ್ಚಿಸುವೆ. ಇಂತಹ ವಿಷಯಗಳಿಗೆ ಅವರು ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ ಮಾತನಾಡಿ, ಈಗಿನ ತಾಂತ್ರಿಕ ಯುಗದಲ್ಲಿ ದೇಶದ ಕಲೆ, ಸಂಸ್ಕೃತಿ, ಪರಂಪರೆ ಮರೆಯಾಗುತ್ತಿದೆ. ನಮ್ಮಲ್ಲಿರುವಷ್ಟು ಸಮೃದ್ಧ ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪದ ಪರಂಪರೆ ಬೇರೆಲ್ಲೂ ಇಲ್ಲ. ಏನೆಲ್ಲಾ ತಂತ್ರಜ್ಞಾನ ಬೆಳೆದಿದ್ದರೂ ಬೇಲೂರು, ಹಳೆಬೀಡಿನಂತಹ ಸ್ಮಾರಕಗಳನ್ನು ಈಗ ಮಾಡಲಾದೀತೇ? ಈ ನಮ್ಮ ಪರಂಪರೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಹೇಳಿದರು.

ಮೈಸೂರು, ಮಂಡ್ಯ ಹಾಗೂ ಹಾಸನ ಮೊದಲಾದ ಕಡೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ತಂದು, ವಿ.ವಿಯಲ್ಲಿ ವಸ್ತುಸಂಗ್ರಹಾಲಯ ಮಾಡಬಹುದು. ಇದಕ್ಕಾಗಿ ಆಯಾ ಜಿಲ್ಲಾಧಿಕಾರಿಗಳ ನೆರವು, ಸರ್ಕಾರದಿಂದ ಅನುದಾನ ಪಡೆಯಬಹುದು. ಮ್ಯೂಸಿಯಂಗೆ ಪ್ರವಾಸಿಗರನ್ನೂ ಸೆಳೆಯಬಹುದಾಗಿದೆ ಎಂದು ಸಲಹೆ ನೀಡಿದರು.

ಪ್ರಾಚೀನ ಇತಿಹಾಸ, ‍ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಮಾತನಾಡಿ, ಸರ್ಕಾರದ ಆದೇಶದಂತೆ ಕಾಲೇಜುಗಳಲ್ಲಿ ಪರಂಪರೆ ಕೂಟವನ್ನು ರಚಿಸಲಾಗಿದೆ. ನನ್ನ ತಿಳಿವಳಿಕೆಯ ಪ್ರಕಾರ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಿರುವುದು ನಮ್ಮಲ್ಲೇ ಮೊದಲು ಎಂದರು.

ಕೂಟಕ್ಕೆ 50 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲು ಅವಕಾಶವಿದೆ. ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವುದು, ಸ್ಮಾರಕಗಳಿಗೆ ಭೇಟಿ–ಸ್ವಚ್ಛತಾ ಕಾರ್ಯಕ್ರಮ–ಶ್ರಮ ದಾನ, ವಿಚಾರಸಂಕಿರಣ, ಕಾರ್ಯಾಗಾರ ಮೊದಲಾದ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಪರೀಕ್ಷಾಂಗ ಕುಲಸಚಿವ ಡಾ.ಪ್ರವೀಣ್ ಕೆ.ಬಿ., ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷಾ, ಡೀನ್‌ಗಳಾದ ಡಾ.ರಾಮನಾಥಂ ನಾಯ್ಡು, ಡಾ.ಅಶೋಕ್ ಕಾಂಬ್ಳೆ, ಪ್ರಾಚ್ಯವಸ್ತು, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕಿ ಡಾ.ಸಿ.ಎನ್‌.ಮಂಜುಳಾ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಲ.ನ.ಸ್ವಾಮಿ ಹಾಗೂ ಗೌತಮ್ ಜಂತಕಲ್ ಪಾಲ್ಗೊಂಡಿದ್ದರು.

ಬಳಿಕ, ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಸೋಮನಾಥಪುರಕ್ಕೆ ಕರೆದೊಯ್ದು ಪ್ರಾತ್ಯಕ್ಷಿಕೆ ನೀಡಲಾಯಿತು.