ಮನೆ ರಾಜ್ಯ ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಇಡಿ ದಾಳಿ: ಕಾಂಗ್ರೆಸ್’ಗೂ, ಇಡಿ ದಾಳಿಗೂ ಸಂಬಂಧವಿಲ್ಲವೆಂದ ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಇಡಿ ದಾಳಿ: ಕಾಂಗ್ರೆಸ್’ಗೂ, ಇಡಿ ದಾಳಿಗೂ ಸಂಬಂಧವಿಲ್ಲವೆಂದ ಕಿಮ್ಮನೆ ರತ್ನಾಕರ್

0

ಶಿವಮೊಗ್ಗ(Shivamogga): ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಇಡಿ ಮತ್ತು ಎನ್ ಐಎ ಕಾರ್ಯಾಚರಣೆ ನಡೆಸಿದ್ದು, ಶಂಕಿತ ಉಗ್ರರಾದ ಮಾಜ್ ಮುನೀರ್, ಶಾರಿಕ್, ಮತೀನ್ ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು ಇದೆ ವೇಳೆ ಕಾಂಗ್ರೆಸ್ ಕಚೇರಿ ಇರುವ ಕಟ್ಟಡದಲ್ಲೂ ಶೋಧ ನಡೆಸಲಾಗಿದೆ.

ಶಂಕಿತ ಉಗ್ರ ಶಾರೀಕ್ ಅಜ್ಜನ ಒಡೆತನದ ಕಟ್ಟಡದಲ್ಲಿರುವ ಕಾಂಗ್ರೆಸ್ ಕಚೇರಿಗೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಶಂಕಿತ ಉಗ್ರರ ಹಣದ ವಹಿವಾಟಿನ ತನಿಖೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ವಿವಿಧ ಭಾಗದಲ್ಲಿ ಅಧಿಕಾರಿಗಳು ಶೋಧ ಮಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ’ನಾನು ನನ್ನ ಗೃಹ ಕಚೇರಿಯಲ್ಲಿದ್ದಾಗ, ಪಕ್ಷದ ಕಚೇರಿಗೆ ಬರಬೇಕೆಂದು ನನಗೆ ಫೋನ್ ಬಂದಿತು. ನಾನು ಪಕ್ಷದ ಕಚೇರಿಗೆ ಬಂದಾಗ ತನಿಖಾ ತಂಡದವರು ಬಂದು ಪಕ್ಷದ ಕಚೇರಿಯನ್ನು ಬಾಡಿಗೆ ಪಡೆದಿರುವ ಕುರಿತು ಮಾಹಿತಿ ಕೇಳಿದರು. ನಾವು 10 ಲಕ್ಷಕ್ಕೆ ಆಸಿಮ್ ಅವರ ಬಳಿ 2015 ರಲ್ಲಿ 8 ವರ್ಷಕ್ಕೆ ಲೀಸ್​ ಪಡೆದುಕೊಂಡಿದ್ದೇವೆ. ಪ್ರತಿ ತಿಂಗಳು 1 ಸಾವಿರ ರೂ ಬಾಡಿಗೆ ನೀಡಬೇಕೆಂದು ಕರಾರು ಆಗಿದೆ. ನಮ್ಮ ಅವಧಿ ಮುಗಿದ ಮೇಲೆ ನಮಗೆ ಠೇವಣಿ ಹಣ ವಾಪಸ್ ನೀಡಿದರೆ, ನಾವು ಕಟ್ಟಡ ಬಿಟ್ಟು ಕೂಡುವುದಾಗಿ ತಿಳಿಸಿರುವುದಾಗಿ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ಅಸಿಮ್ ಕುಟುಂಬಕ್ಕೂ ನಮಗೂ ಮಾಲೀಕರು ಹಾಗೂ ಬಾಡಿಗೆದಾರರ ಸಂಬಂಧ ಬಿಟ್ಟರೆ, ಬೇರೆ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ಪಕ್ಷದ ವಿಚಾರ ಹಾಗೂ ನನ್ನ ವಿಚಾರ ಬರುತ್ತಿದೆ. ಅದು ಬಿಜೆಪಿಯ ಕಪೋಲ ಕಲ್ಪಿತ ವದಂತಿ ಎಂದರು.

ಅಸೀಮ್​’ಗೂ ಗೃಹ ಸಚಿವ ಆರಗ ಜ್ಞಾನೇಂದ್ರಗೂ ಏನ್ ಸಂಬಂಧವಿದೆ ಎಂದು ನನಗೆ ಗೊತ್ತಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಉಳಿದ ಮಾಹಿತಿ ಗೃಹ ಸಚಿವರ ಬಳಿ ಇದೆ. ತೀರ್ಥಹಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಸುವವರು ಅವರೇ, ಅವರು ಸಹ ಹಿಂದಿನ ಕೇಸುಗಳಲ್ಲಿ ಇದ್ದಾರೆ. ನಮಗೂ ಅಸೀಮ್ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದರು‌.

ಮನೆ ಮೇಲೆ ದಾಳಿ ನಡೆದಿಲ್ಲ: ನಮ್ಮ ಮನೆ ಮೇಲೆ ಯಾವುದೇ ದಾಳಿ ನಡೆದಿಲ್ಲ. ನಮ್ಮ ಮನೆಗೆ ಬಂದರೆ 10 ಸಾವಿರ ರೂ ಹಣ ಸಹ ಸಿಗುವುದಿಲ್ಲ. ಇಡಿ ಅವರೇ ಏನಾದ್ರೂ‌ ಕೊಟ್ಟು ಹೋಗಬೇಕಷ್ಟೆ. ನಮ್ಮ ಮನೆಯಲ್ಲಿ ಫ್ರಿಡ್ಜ್, ಸೂಫಾ ಬಿಟ್ಟರೆ ಬೇರೆ ಏನೂ ಸಿಗುವುದಿಲ್ಲ. ಈಗ ಚುನಾವಣೆ ಬಂದಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ‌. ಏಕೆಂದರೆ ಬಿಜೆಪಿ ಅವರು ತಮ್ಮ ಮಾನಮರ್ಯಾದೆಯನ್ನು ಕಳೆದು‌ಕೊಂಡಿದ್ದಾರೆ. ಅವರು ಆಡಳಿತದಲ್ಲಿ ಎಲ್ಲವನ್ನು ಕಳೆದು ಕೊಂಡಿದ್ದಾರೆ. ಜಾತಿ ಧರ್ಮದಲ್ಲಿ ಏನಾದರು ಮಾಡಲು ಆಗುತ್ತದಾ ಎಂದು ನೋಡುತ್ತಿದ್ದಾರೆ ಎಂದರು.