ನವದೆಹಲಿ: ಹಿರಿಯ ರಾಜಕಾರಣಿ, ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಶರದ್ ಯಾದವ್ ಗುರುವಾರ ರಾತ್ರಿ ನಿಧನರಾಗಿದ್ದಾರೆ,
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
75 ವರ್ಷ ವಯಸ್ಸಿನ ಅವರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಅವರು ರಾತ್ರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ‘ಪಪ್ಪಾ ನಹೀ ರಹೇ’ ಎಂದು ಪೋಸ್ಟ್ ಹಾಕುವ ಮೂಲಕ ತಂದೆಯ ಅಗಲಿಕೆಯನ್ನು ದೃಢಪಡಿಸಿದ್ದಾರೆ.
ಸಂತಾಪ ಸೂಚಿಸಿದ ಗಣ್ಯರು
ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿ, ಶರದ್ ಯಾದವ್ ಅವರ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹೋರಾಡಿದ ಎಪ್ಪತ್ತರ ದಶಕದ ವಿದ್ಯಾರ್ಥಿ ನಾಯಕ ಶರದ್ ಅವರು ಸಂಸತ್ತಿನಲ್ಲಿ ಶೋಷಿತರ ಪರವಾದ ಧ್ವನಿಯಾಗಿದ್ದರು. ಅವರ ನಿಧನಕ್ಕೆ ಸಂತಾಪಗಳು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಅವರ ನಿಧನದಿಂದ ನೋವಾಗಿದೆ. ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅವರು ಸಂಸತ್ ಸದಸ್ಯರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಡಾ. ಲೋಹಿಯಾ ಆದರ್ಶಗಳಿಂದ ಪ್ರೇರಿತರಾಗಿದ್ದ ಅವರ ಮತ್ತು ನನ್ನ ನಡುವಿನ ಮಾತುಕತೆ, ಸಮಾಲೋಚನೆಗಳನ್ನು ಯಾವಾಗಲೂ ಗೌರವಿಸುತ್ತೇನೆ. ಕುಟುಂಬ ಮತ್ತು ಅಭಿಮಾನಿಗಳಿಗೆ ಶರದ್ ಯಾದವ್ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಸಮಾಜವಾದದ ನಾಯಕರಾಗಿದ್ದ ಅವರು, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ದೇಶಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಟ್ವೀಟ್ ಮಾಡಿ, ನನ್ನ ಬಹುಕಾಲದ ಗೆಳೆಯ ಮತ್ತು ಜನತಾ ಪರಿವಾರದ ಒಡನಾಡಿ ಶರದ್ ಯಾದವ್ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ಅವರ ಆರೋಗ್ಯ ವಿಚಾರಿಸಲು ಕೆಲ ತಿಂಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.