ಮಂಗಳೂರು(Mangalore): ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಳಗೊಂಡ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರದ ಹಲ್ಸೂರು ನಿವಾಸಿ ನಗರದ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಮಾಡುತ್ತಿರುವ ವೈದ್ಯ ಬಾಲಾಜಿ (29) ಮತ್ತು ಆಂಧ್ರಪ್ರದೇಶದ ಅನಸ್ತೇಶಿಯಾ ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವ ರಾಘವ ದತ್ತಾ(28) ಬಂಧಿತ ಆರೋಪಿಗಳಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾತನಾಡಿ, ಈ ಪ್ರಕರಣದಲ್ಲಿ ಬಂಧಿತ ವೈದ್ಯ ಡಾ.ಬಾಲಾಜಿ ಫಳ್ನೀರ್’ನಲ್ಲಿ ವಾಸ್ತವ್ಯವಿದ್ದ. ಈತ ತಾನು ವಾಸ್ತವ್ಯವಿರುವ ಮನೆಯಲ್ಲಿಯೇ ಸಣ್ಣಮಟ್ಟಿನ ಪಾರ್ಟಿ ಆಯೋಜಿಸಿ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದನು. ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜನವರಿ 11ರಂದು ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ವೈದ್ಯರು, ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಬಂಧಿಸಿದ್ದರು.
ಜ.7 ರಂದು ಬಿಡಿಎಸ್ ವಿದ್ಯಾರ್ಥಿ, ಯುಕೆಯ ವಿದ್ಯಾರ್ಥಿ ಇದ್ದ ಫ್ಲ್ಯಾಟ್ ಮೇಲೆ ದಾಳಿ ಮಾಡಿ ಆತನಿಂದ ಎರಡು ಕೆ.ಜಿ ಗಾಂಜಾ, ಆಟಿಕೆ ಪಿಸ್ತೂಲ್, ಎರಡು ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ ಮಾಪನ ವಶಪಡಿಸಿಕೊಂಡಿದ್ದರು.
ಆಗ ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದನ್ನು ಆಧಾರಿಸಿ ಪೊಲೀಸರು ದಾಳಿ ನಡೆಸಿ ಮತ್ತೆ 9 ಮಂದಿಯನ್ನು ಬಂಧಿಸಿದ್ದರು.