ಮನೆ ರಾಜ್ಯ ರಸ್ತೆಯಲ್ಲಿ ತಂದೆಯನ್ನು ಬಿಟ್ಟು ಹೋದ ಮಕ್ಕಳು: ವೃದ್ಧರನ್ನು ನಿವಾಸಕ್ಕೆ ತಲುಪಿಸಿ ಮಾನವೀಯತೆ ಮೆರೆದ ಪೊಲೀಸರು ಮತ್ತು...

ರಸ್ತೆಯಲ್ಲಿ ತಂದೆಯನ್ನು ಬಿಟ್ಟು ಹೋದ ಮಕ್ಕಳು: ವೃದ್ಧರನ್ನು ನಿವಾಸಕ್ಕೆ ತಲುಪಿಸಿ ಮಾನವೀಯತೆ ಮೆರೆದ ಪೊಲೀಸರು ಮತ್ತು ಹೊಸಹುಂಡಿಯ ಸಾಮಾಜಿಕ ಹೋರಾಟಗಾರ ಚಂದ್ರು

0

ಮೈಸೂರು(Mysuru): ಹುಟ್ಟಿನಿಂದ ಕಷ್ಟಪಟ್ಟು ಸಾಕಿ ಸಲಹಿದ ತಂದೆ ತಾಯಿಯನ್ನು ಬೀದಿಗೆ ತಂದು ಬಿಟ್ಟು ಹೋಗುವ ಘಟನೆಗಳು ಆಗಾಗ ಜರುಗುತ್ತಲೇ ಇದ್ದು, ಮಾನವೀಯತೆಯೇ ಮರೆಯಾಗಿದೆ. ಇಂತಹದ್ದೇ ಒಂದು ಮನಕಲಕುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಸುಮಾರು 63 ವರ್ಷದ  ತಂದೆಯನ್ನು ಹೆತ್ತ ಮಕ್ಕಳೇ ಹೊಸಹುಂಡಿ ರಿಂಗ್ ರಸ್ತೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದು, ಆ ಹಿರಿಯ ಜೀವ ರಸ್ತೆ ಪಕ್ಕದ ಪಾಳು ಬಿದ್ದ ಅಂಗಡಿಯಲ್ಲಿ ಐದು ರಾತ್ರಿಗಳನ್ನು ಕಳೆದಿದ್ದಾರೆ.

ಈ ವೃದ್ಧರನ್ನು ಗಮನಿಸಿದ ಹೊಸಹುಂಡಿಯ ಸಾಮಾಜಿಕ ಹೋರಾಟಗಾರ ಚಂದ್ರು ಅವರು, ವೃದ್ಧರ ಪೂರ್ವಪರವನ್ನು ಕೇಳಿ 112ಗೆ ಕರೆ ಮಾಡಿ ಹೈವೇ ಪೆಟ್ರೋಲ್’ಗೆ  ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸ್ ಕಾನ್ಸ್’ಟೇಬಲ್ ಮಂಜುನಾಥ್ ಮೇಲನಾಡ ಹಾಗೂ ಪವನ್ ಕುಮಾರ್  ಅವರು  ಹೊಸಹುಂಡಿಯ ಸಾಮಾಜಿಕ ಹೋರಾಟಗಾರ ಚಂದ್ರು ಅವರ ಸಹಾಯದಿಂದ ವೃದ್ಧರನ್ನು ಅವರ ನಿವಾಸಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

ವೃದ್ಧರನ್ನು ಮನೆಗೆ ತಲುಪಿಸಿದ ನಂತರ ವೃದ್ಧರ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯ ಬಗ್ಗೆ ಪಾಠ ಹೇಳಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ವೃದ್ಧರನ್ನು ಹೀಗೆ ಒಂಟಿಯಾಗಿ ಹೊರಗೆ ಕಳುಹಿಸಬಾರದೆಂದು, ವಯಸ್ಸಾದವರನ್ನು ಮಕ್ಕಳಂತೆ ನೋಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದ್ದಾರೆ.

ಹೊಸಹುಂಡಿಯ ಸಾಮಾಜಿಕ ಹೋರಾಟಗಾರ ಚಂದ್ರು ಹಾಗೂ ಪೊಲೀಸರ ಈ ಸಮಾಜಮುಖಿ ಕಾರ್ಯಕ್ಕೆ ಮೈಸೂರಿನ ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.