ಮೈಸೂರು(Mysuru): ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆಯು ದಲಿತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ದೂರದೃಷ್ಟಿಯಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಜಾರಿಗಾಗಿ ಎಲ್ಲಾ ರಾಜ್ಯಗಳು ತಮಗೆ ಒದಗಿಸಲಾಗಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಈ ವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವರಾದ ಎ. ನಾರಾಯಣ ಸ್ವಾಮಿ ತಿಳಿಸಿದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಹಾಗೂ ಸಂಬoಧಪಟ್ಟ ನಿಯಮ ಹಾಗೂ ಅಧಿನಿಯಮಗಳ ಬಗ್ಗೆ ನಗರದ ಲಲಿತ ಮಹಲ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೀನದಲಿತ ಸಮುದಾಯಕ್ಕಾಗಿ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದು ನಮ್ಮ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕರ್ತವ್ಯ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಪರಿಚಯಿಸಿದ ಸಾಕಷ್ಟು ಕೌಶಲ್ಯ ಕಾರ್ಯಕ್ರಮಗಳನ್ನು ನಾವು ಹೊಂದಿದ್ದೇವೆ. ಅವರ ದೃಷ್ಟಿಕೋನವು ಎಲ್ಲಾ ರಾಜ್ಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಂತ್ರವಾಗಿರಬೇಕು, ಇದಕ್ಕಾಗಿ ರಾಜ್ಯಗಳಿಗೆ ಮೀಸಲಾದ ಹಣವನ್ನು ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಬೇಕು. ಪ್ರಧಾನಿ ಮೋದಿ ಜಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಮಹಿಳೆಯರ ಸಬಲೀಕರಣ ಮತ್ತು ಉನ್ನತಿಗಾಗಿ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್-ಅಪ್ ಯೋಜನೆ, ಸ್ಕಿಲ್ ಇಂಡಿಯಾ ಮತ್ತು ಸ್ವಾನಿದಿ ಮುಂತಾದ ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಸಮಾಜದ ವಂಚಿತ ವರ್ಗಗಳು ಸೇರಿದಂತೆ ಯುವಕರಿಗೆ ಸಾಲ ನೀಡುವ ಮೂಲಕ ನಾವು ಸಂಪೂರ್ಣ DAPSC ಬಜೆಟ್‌ನ ಪಾಲಕರಾಗಿದ್ದೇವೆ ಎಂದರು.
ರಾಜ್ಯದ ವಿವಿಧ ಇಲಾಖೆಗಳ ಮತ್ತು ವಿವಿಧ ಯೋಜನೆಗಳ ಕೇಂದ್ರ ಸರ್ಕಾರದ ನಿಧಿಯ ಬಳಕೆಯನ್ನು ಆರ್ಥಿಕ ಸಹಾಯಕ್ಕಾಗಿ, ಸ್ವಯಂ-ಸಬಲೀಕರಣಕ್ಕಾಗಿ ಮತ್ತು ದೇಶದ ದೀನದಲಿತ ಜನರಿಗೆ ಉತ್ತಮ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಬಳಸಬೇಕು ಎಂದರು.
ಕರ್ನಾಟಕ ಸರ್ಕಾರವು ಎಸ್‌ಸಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ನಿಗದಿಪಡಿಸಿದೆ. ಇದು ಎಲ್ಲಾ ರಾಜ್ಯಗಳಿಗೆ ಮಾದರಿಯಾಗಬೇಕು ಮತ್ತು ಅಂತಹ ಉತ್ತಮ ಅಭ್ಯಾಸವನ್ನು ಅವರು ಅಳವಡಿಸಿಕೊಳ್ಳಬೇಕು. ಮಹಿಳೆಯರ ಸಬಲೀಕರಣಕ್ಕಾಗಿ ಕೇರಳದ ಕುಟುಂಬಶ್ರೀ ಯೋಜನೆ ಕೂಡ ಉತ್ತಮ ಉದಾಹರಣೆಯಾಗಿದೆ ಎಂದರು. ಕರ್ನಾಟಕದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಡಿಯಲ್ಲಿ ಲಿಡ್‌ಕರ್ ಔಟ್‌ಲೆಟ್‌ಗಳು ಇತರ ದೊಡ್ಡ ಬ್ರ‍್ಯಾಂಡ್‌ಗಳೊoದಿಗೆ ಸ್ಪರ್ಧಿಸುತ್ತಿವೆ. ಕರ್ನಾಟಕದಲ್ಲಿ ಚಮ್ಮಾರರಿಗೆ ಉಚಿತ ಮನೆಗಳನ್ನು ನೀಡಲಾಗುತ್ತಿದೆ ಮತ್ತು ಅದರಲ್ಲೇ ಚರ್ಮದ ಉತ್ಪನ್ನಗಳನ್ನು ತಯಾರಿಸಲು ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ವಿವಿಧ ಸಮುದಾಯಗಳ ಕಲ್ಯಾಣ ಮತ್ತು ಉನ್ನತಿಗಾಗಿ ಅನೇಕ ವಿಶೇಷ ನಿಗಮಗಳನ್ನು ಸ್ಥಾಪಿಸಲಾಗಿದೆ.
SC ಸಮುದಾಯದ ಯುವಕರ ಜೀವನೋಪಾಯಕ್ಕಾಗಿ ವ್ಯಾಪಾರ ಉದ್ಯಮಗಳಿಗೆ ಬಂಡವಾಳ ಸಬ್ಸಿಡಿ ನೀಡಲು PM ಯುವ ಉದ್ಯಮಿ ಯೋಜನೆ (PM-YES) ಈ ಮೂರು ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
31 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಎಸ್‌ಸಿ ಸಮುದಾಯದ ಆಕಾಂಕ್ಷಿಗಳಿಗೆ ಉಚಿತ ಯುಪಿಎಸ್‌ಸಿ ಕೋಚಿಂಗ್‌ಗಾಗಿ ಡಾ. ಅಂಬೇಡ್ಕರ್ ಸೆಂಟರ್ ಫಾರ್ ಎಕ್ಸಲೆನ್ಸ್ ಅನ್ನು ಪ್ರಾರಂಭಿಸಿದ್ದೇವೆ. ಸಚಿವಾಲಯವು ಎಸ್‌ಸಿ ಉದ್ಯಮಿಗಳಿಗೆ ಸಾಲದ ಮೇಲಿನ ಬಡ್ಡಿಯನ್ನು ಶೇ.8 ರಿಂದ ಶೇ.4 ಕ್ಕೆ ಇಳಿಸಿದೆ ಮತ್ತು ರೂ. 10 ಸಾವಿರದಿಂದ ರೂ. 50 ಸಾವಿರದವರೆಗೆ ಸಬ್ಸಿಡಿಯನ್ನು ನೀಡುತ್ತಿದೆ. ನಮ್ಮ ಇಲಾಖೆಯು ಕಾಯಿದೆಗಳು ಮತ್ತು ನಿಯಮಗಳ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ನಡೆಸುತ್ತಿದೆ ಮತ್ತು ದೇಶದಲ್ಲಿನ ದೀನದಲಿತ ಸಮುದಾಯದ ಅನುಕೂಲಕ್ಕಾಗಿ ರಾಜ್ಯಗಳಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ರವರು ಮಾತನಾಡಿ, ಕರ್ನಾಟಕ ರಾಜ್ಯ ಎಸ್ ಸಿ ಎಸ್ ಟಿ ಜನಾಂಗಗಳಿಗೆ ಸೌಲಭ್ಯ ನೀಡುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು ಈ ಸಮುದಾಯಗಳಿಗೆ 29 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದೇವೆ ಎಂದರು.
ಎಸ್ಸಿ ಎಸ್ಟಿ ಜನಾಂಗಗಳ 23 ಲಕ್ಷ ಕುಟುಂಬಗಳಿಗೆ 75 ಯೂನಿಟ್ ಉಚಿತವಾಗಿ ವಿದ್ಯುತ್ ನೀಡಲು 800 ಕೋಟಿ ಖರ್ಚು ಮಾಡಲಾಗುತ್ತದೆ. ಕೇಂದ್ರದ ನವೋದಯ ಮಾದರಿಯಲ್ಲಿ 830 ಕ್ರೈಸ್ ಕಾಲೇಜುಗಳನ್ನು ಆರಂಭಿಸಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮೂಲಕ ಪ್ರತಿಷ್ಠಿತ ಶಾಲೆಗಳ ಮಟ್ಟದಲ್ಲಿ ಶಿಕ್ಷಣ ಕೊಡಲಾಗುತ್ತಿದೆ ಹಾಗೂ ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವ 90 ವಿದ್ಯಾರ್ಥಿಗಳು ವಿದೇಶ ವ್ಯಾಸಂಗಕ್ಕೆ ತೆರಳಿದ್ದಾರೆ ಎಂದರು.
ಎರಡು ಸಾವಿರಕ್ಕೂ ಹೆಚ್ಚು ಹಾಸ್ಟೆಲ್ ನಿರ್ಮಿಸಲಾಗಿದೆ. ಎಸ್‌ಸಿ ಪ್ರವರ್ಗದಲ್ಲಿ 101 ಜಾತಿಗಳು ಇದ್ದು ಇವರಿಗೆ ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಯಲ್ಲಿ ನೆರವು ನೀಡಲಾಗಿದೆ.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 7 ಸಾವಿರದಿಂದ 25 ಸಾವಿರದವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಕೈಗಾರಿಕೆಗಳನ್ನು ಆರಂಭಿಸುವ ಉದ್ಯಮಿಗಳಿಗಾಗಿ ಕೈಗಾರಿಕಾ ಶೆಡ್ ನಿರ್ಮಾಣಕ್ಕಾಗಿ ಶೇ.75ರಷ್ಟು ಸಹಾಯಧನದೊಂದಿಗೆ 2 ಕೋಟಿವರೆಗೆ ಸಾಲ ಸೌಲಭ್ಯವನ್ನು ಸರ್ಕಾರದ ಗ್ಯಾರಂಟಿ ಯೊಂದಿಗೆ ನೀಡುತ್ತಿದ್ದು, ಕೆಎಸ್‌ಎಫ್‌ಸಿ ವತಿಯಿಂದ ಶೇಕಡ 4 ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಇದಕ್ಕಾಗಿ 323 ಕೋಟಿಗಳ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಎಸ್ಸಿ, ಎಸ್ಟಿ ಹಾಗೂ ಕ್ರೈಸ್ತ ಶಾಲೆಯ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. 2 ಸಾವಿರಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ. ಅಸ್ಪೃಶ್ಯತೆ ವಿರುದ್ಧ ಹೊರಡಲು ಜನಾಂದೋಲನ ಕಾಯ್ದೆಗೆ ವಿನಯ್ ಯೋಜನೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಲಕ್ಷದೀಪ, ಅಂಡಮಾನ್, ನಿಕೋಬಾರ್ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ರಾಕೇಶ್ ಕುಮಾರ್, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಹಾಗೂ ಭಾರತ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.