ಮನೆ ರಾಜಕೀಯ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತವರಿಗೆ ಇಂದು ಪ್ರಧಾನಿ ಮೋದಿ ಆಗಮನ: 10 ಸಾವಿರ ಕೋಟಿ ಕಾಮಗಾರಿ...

ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತವರಿಗೆ ಇಂದು ಪ್ರಧಾನಿ ಮೋದಿ ಆಗಮನ: 10 ಸಾವಿರ ಕೋಟಿ ಕಾಮಗಾರಿ ಉದ್ಘಾಟನೆ

0

ಯಾದಗಿರಿ(Yadagiri): ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಗೆ ಇಂದು ಪ್ರಧಾನಿ ನರೇಂದ್ರ ಮೋದಿ‌ ಆಗಮಿಸುತ್ತಿದ್ದು ರಾಜಕೀಯ ರಂಗದಲ್ಲಿ‌ ಸಂಚಲನ ಮೂಡಿಸಿದೆ.‌

ಒಂದೇ ತಿಂಗಳಿನಲ್ಲಿ ಎರಡನೇ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ‘ನಮೋ’ ಸ್ವಾಗತಕ್ಕೆ ರಾಜ್ಯ ಬಿಜೆಪಿ ಸಕಲ ತಯಾರಿ ಮಾಡಿಕೊಂಡಿದೆ.

ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ ನಲ್ಲಿ ₹10,813 ಕೋಟಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಡಿಗಲ್ಲು, ಉದ್ಘಾಟನೆ ನೆರವೇರಿಸಲಿದ್ದಾರೆ‌.

ಸ್ಕಾಡಾ ತಂತ್ರಜ್ಞಾನದ ಮೂಲಕ ಬಸವಸಾಗರ ಜಲಾಶಯದ ಕಾಲುವೆಯ ಗೇಟ್ ಗಳನ್ನು ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವ ಯೋಜನೆ ಉದ್ಘಾಟನಾ ಹಾಗೂ ಎಕ್ಸ್ಪ್ರೆಸ್ ವೇ, ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಿದ್ದಾರೆ.

ಕೊಡೇಕಲ್ ಹೊರವಲಯದ ಹುಣಸಗಿ-ನಾರಾಯಣಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಜಿಲ್ಲಾಡಳಿತ ವತಿಯಿಂದ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿದೆ.

ಕಾರ್ಯಕ್ರಮಕ್ಕೆ ₹10 ಕೋಟಿ ಅನುದಾನ ಬಿಡುಗಡೆಯಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಎಲ್ಲಿ ನೋಡಿದರೂ ಖಾಕಿ ಪಡೆ ಕಾಣಿಸುತ್ತಿದೆ.

ಕಾರ್ಯಕ್ರಮಕ್ಕೆ ಬರುವ ಜನರಿಗೆ ಭೂರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ ಬಲಭಾಗದಲ್ಲಿ ಅಚ್ಚುಕಟ್ಟಾಗಿ ಅಡುಗೆ ತಯಾರಿ ಮಾಡಲಾಗಿದೆ.ಉತ್ತರ ಕರ್ನಾಟಕ ಶೈಲಿಯಲ್ಲಿ 230 ಕೌಂಟರ್ ನಲ್ಲಿ ಗೋಧಿ ಹುಗ್ಗಿ, ಪಲಾವ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 300-350 ಬಾಣಸಿಗರಿಂದ ಅಡುಗೆ ತಯಾರಿ ನಡೆದಿದೆ.

ವಿವಿಧ ಕಲಾ ತಂಡಗಳು ವೀರಗಾಸೆ ಸೇರಿದಂತೆ ಇನ್ನಿತರ ಪ್ರದರ್ಶನ ನೀಡುತ್ತಿವೆ. ಖಾಸಗಿ ವಾಹನಗಳಿಂದ ತಂಡೋಪ ತಂಡವಾಗಿ ಸಾರ್ವಜನಿಕರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಮೋದಿ ಭಾವಚಿತ್ರಗಳನ್ನು ಹಿಡಿದು ಸಾರ್ವಜನಿಕರು ಸಂಭ್ರಮಿಸುತ್ತಿದ್ದಾರೆ.