ಮನೆ ಸುದ್ದಿ ಜಾಲ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿಯೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ: ಹೆಚ್ ಪಿ ಮಂಜುನಾಥ್

ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿಯೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ: ಹೆಚ್ ಪಿ ಮಂಜುನಾಥ್

0

ಮೈಸೂರು: ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸದಾ ಸಿದ್ಧವಾಗಿರುತ್ತದೆ ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿಯೇ ಜಿಲ್ಲಾಧಿಕಾರಿಗಳ ನಡೆಯ ಕಡೆ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಶಾಸಕರಾದ ಎಚ್‌ಪಿ ಮಂಜುನಾಥ್ ತಿಳಿಸಿದರು.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಲ್ಲಿ ಜನರು ಮುಂದಾಗಬೇಕು. ಕೆಲವು ಸಮಸ್ಯೆಗಳನ್ನು ಈ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿಲ್ಲವಾದರೂ ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.

ಕೋವಿಡ್ ನಂತರದ ದಿನಗಳಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಶೇ.48 ರಷ್ಟಿದೆ. ಇದರಿಂದ ನಿಜಕ್ಕೂ ಬಹಳ ತೊಂದರೆ ಉಂಟಾಗಿದ್ದು, ಈ ಗ್ರಾಮದಲ್ಲಿಯೂ ಬಸ್‌ನ ಸಮಸ್ಯೆ ಇರುವುದಾಗಿ ಪ್ರೌಢಶಾಲಾ ಮಕ್ಕಳು ತಿಳಿಸಿದ್ದು, ಸಮಸ್ಯೆಯನ್ನು ಪರಿಹರಿಸುವಲ್ಲಿ ಕೆಲಸ ಮಾಡುತ್ತೇವೆ. ಸಲ್ಲಿಸುವ ಅರ್ಜಿಗಳ ಕುರಿತು ನಿಮ್ಮ ನಿಮ್ಮಲ್ಲಿಯೇ ಆಕ್ಷೇಪ, ಗಲಾಟೆಗಳು ಬೇಡ. ನೇರವಾಗಿ ನಿಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮತ್ತು ಉಪವಿಭಾಗಾಧಿಕಾರಿಗಳ ಮುಂದೆ ತನ್ನಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಕೆ ವಿ ರಾಜೇಂದ್ರ ಮಾತನಾಡಿ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಈ ಮಹತ್ತರ ಕಾರ್ಯಕ್ರಮದ ಮೂಲಕ, ಬಸ್ ಸಮಸ್ಯೆ ಇರುವ ಇಂತಹ ಹಳ್ಳಿಯಿಂದ ತಮ್ಮ ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕಚೇರಿಗಳಿಗೆ ಬರಲು ಎಷ್ಟು ಕಷ್ಟ ಎಂದು ತಿಳಿದಿದೆ. ಆದ್ದರಿಂದ ರಾತ್ರಿ 12 ಗಂಟೆಯಾದರೂ ಪರವಾಗಿಲ್ಲ ಎಲ್ಲರ ಸಂಪೂರ್ಣ ಸಮಸ್ಯೆಗಳನ್ನು ಆಲಿಸಿಯೇ ಕಾರ್ಯಕ್ರಮದಿಂದ ತೆರಳುವುದಾಗಿ ತಿಳಿಸಿದರು.

ಹಾಡಿ, ಆಶ್ರಮ ಶಾಲೆ, ಪ್ರೌಢಶಾಲೆ ಹಾಗೂ ಕೆರೆ ವೀಕ್ಷಣೆ ಮಾಡಿದ ಅವರು ಕೆರೆ ಒತ್ತುವರಿ, ಸ್ಮಶಾನದ ಒತ್ತುವರಿ, ಗೋಮಾಳದ ಒತ್ತುವರಿ ಮುಂತಾದ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿರುವುದಾಗಿ ತಿಳಿಸಿದರು. ಪ್ರೌಢಶಾಲಾ ಮಕ್ಕಳೊಟ್ಟಿಗೆ ಚರ್ಚಿಸಿ ಮಕ್ಕಳಿಂದ ಅವರ ಸಮಸ್ಯೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.

ಎಲ್ಲಾ ಸಮಸ್ಯೆಗಳಿಗೂ ತಕ್ಷಣವೇ ಪರಿಹಾರ ಕಲ್ಪಿಸಲಾಗದಿದ್ದರೂ ಸಮಸ್ಯೆಗೆ ಸೂಕ್ತ ಮಾರ್ಗದರ್ಶನ ನೀಡುವುದೂ ಸಹ ಒಂದು ರೀತಿಯ ಪರಿಹಾರವೇ ಎಂದರು. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸಾಮಾನ್ಯ ರಸ್ತೆಗಳಿಗೆ ಒಂದು ಕಿಲೋ ಮೀಟರ್ ಗೆ 60ಸಾವಿರ ಅನುದಾನದ ಅವಕಾಶವಿದ್ದು, ರಾಷ್ಟ್ರೀಯ ಹೆದ್ದಾರಿಗಳಿಗೆ ಒಂದು ಕಿಲೋಮೀಟರ್ ಗೆ ಒಂದು ಲಕ್ಷದವರೆಗೆ ಅವಕಾಶವಿದೆ ಎಂದು ತಿಳಿಸಿದರು. ಸಾರ್ವಜನಿಕ ಸಮಸ್ಯೆಗಳಿಗೆ ಮೊದಲು ಆದ್ಯತೆ ನೀಡಿದ ಅವರು ಸಾರ್ವಜನಿಕ ಸಮಸ್ಯೆಗಳ ಪಟ್ಟಿಯನ್ನು ಪಡೆದುಕೊಂಡು, ನಂತರ ವೈಯಕ್ತಿಕ ಸಮಸ್ಯೆಯ ಅರ್ಜಿಗಳನ್ನು ಸ್ವೀಕರಿಸಿದರು.

 ನಂತರ ಫಲಾನುಭವಿಗಳಿಗೆ ಮಾಶಾಸನ, ವ್ರದ್ಧಾಪ್ಯ ವೇತನ, ಹೊಸ ಪಡಿತರ ಚೀಟಿ ಹಾಗೂ ಇತರೆ ಸವಲತ್ತುಗಳ ವಿತರಣೆ ಮಾಡಲಾಯಿತು.