ಭೂಮಿ ಶೆಟ್ಟಿ ಮತ್ತು ಮಾಲಾಶ್ರೀ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಕೆಂಡದ ಸೆರಗು’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದ ಸಿನಿಮಾ ಇದು. ಕಥೆಯೂ ನಿರ್ದೇಶಕರ ಕಾದಂಬರಿ ಆಧರಿತವೇ ಆಗಿದೆ.
ಕುಸ್ತಿ ಸುತ್ತ ಹೆಣೆಯಲಾದ ಈ ಚಿತ್ರದಲ್ಲಿ ಮಾಲಾಶ್ರೀ ಪೊಲೀಸ್ ಕಮಿಷನರ್ ಆಗಿದ್ದಾರೆ. ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ನಟಿಸಿದ್ದಾರೆ.
ನಟಿ ಮಾಲಾಶ್ರೀ ಮಾತನಾಡಿ, ಒಳ್ಳೆಯ ವಿಷಯ ಈ ಚಿತ್ರದಲ್ಲಿದೆ. ಕುಸ್ತಿ ಮಾತ್ರವಲ್ಲ. ಇಲ್ಲಿ ಹೆಣ್ಣೊಬ್ಬಳ ನೋವಿನ ಕಥೆಯೂ ಇದೆ. ಒಳ್ಳೆಯ ಸಂದೇಶವೂ ಇದೆ. ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಕೂಡಾ ಮಾಡಿದ್ದೇನೆ ಎಂದರು.
ಮಹಿಳಾ ಪ್ರಧಾನ ಪಾತ್ರ ಸಿಕ್ಕಿದ್ದಕ್ಕೆ ಭೂಮಿ ಶೆಟ್ಟಿ ಅವರಿಗೂ ಖುಷಿಯಾಗಿದೆಯಂತೆ. ಚಿತ್ರದಲ್ಲಿ ಆರು ಹಾಡುಗಳಿವೆ. ಸದ್ಯ ಚಿತ್ರದ ಡಬ್ಬಿಂಗ್ ಮುಂದುವರಿದಿದೆ. ನಿರ್ದೇಶಕರ ಗೆಳೆಯ ಕೊಟ್ರೇಶ್ ಈ ಚಿತ್ರದ ನಿರ್ಮಾಪಕರು.
ಶ್ರೀಮುತ್ತು ಟಾಕೀಸ್ ಮತ್ತು ಎಸ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತಾ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿಪಿನ್ ವಿ. ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.