ಮನೆ ಸುದ್ದಿ ಜಾಲ ನ್ಯಾಯಾಂಗದಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡಬಾರದು: ನ್ಯಾ. ಸಂತೋಷ್ ಹೆಗ್ಡೆ

ನ್ಯಾಯಾಂಗದಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡಬಾರದು: ನ್ಯಾ. ಸಂತೋಷ್ ಹೆಗ್ಡೆ

0

ಮೈಸೂರು(Mysuru): ನ್ಯಾಯಾಂಗದಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡುವುದು ಅಪಾಯಕಾರಿ ಬೆಳವಣಿಗೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯಲ್ಲಿ, ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.

ನ್ಯಾಯಾಂಗದ ಬಗ್ಗೆ ರಾಜಕಾರಣಿಗಳಿಗೆ ಅಷ್ಟೊಂದು ಜ್ಞಾನ ಇರುವುದಿಲ್ಲ. ಹೀಗಿರುವಾಗ ನ್ಯಾಯಾಧೀಶರ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ವ್ಯಕ್ತಪಡಿಸಿದರು.

ಧರ್ಮ ಮತ್ತು‌ ಭಾಷೆ ವಿಚಾರದಲ್ಲಿ ದೇಶ ವಿಭಜನೆ ಆಗುವ ಆಪಾಯ ಇದೆ ಎಂದರು.

ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನ ಪ್ರತಿನಿಧಿಗಳು ಜನರ ಮಾಲೀಕರು ಎಂಬ ಭಾವನೆ ಹೊಂದಿದ್ದಾರೆ. ರಾಜಕಾರಣಿಗಳು ಪರಸ್ಪರ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಆದರೆ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿಲ್ಲ‌. ಇದೇ ರೀತಿ ಮುಂದುವರೆದರೆ ಜನ ದಂಗೆ ಏಳುವ ಪರಿಸ್ಥಿತಿ ಬರುತ್ತದೆ ವಿಷಾದ ವ್ಯಕ್ತಪಡಿಸಿದರು.

ಕಳೆದ 50 ವರ್ಷಗಳಿಂದಲೂ ಭ್ರಷ್ಟಾಚಾರ ನಡೆಯುತ್ತಿದೆ. ಇವತ್ತು 40 ಪರ್ಸೆಂಟ್​ ಕಮಿಷನ್ ಸರ್ಕಾರ ಎಂದು ಹೇಳುವ ಮಟ್ಟಕ್ಕೆ ಬಂದು ನಿಂತಿದ್ದೇವೆ. ಲೋಕಾಯುಕ್ತ ಮತ್ತಷ್ಟು ಬಲಿಷ್ಠವಾಗಿ, ಮೇಲಿನ ಮಟ್ಟದ ಅಧಿಕಾರಿಗಳನ್ನು ಹಿಡಿದು ಶಿಕ್ಷಿಸಿದರೆ ಕೆಳಗಿನ ಮಟ್ಟದ ಅಧಿಕಾರಿಗಳು‌ ಬುದ್ಧಿ ಕಲಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ನ್ಯಾಯಾಲಯದಲ್ಲಿ ಪ್ರಕರಣಗಳು ದೀರ್ಘಕಾಲ ಎಳೆದುಕೊಂಡು ಹೋಗುತ್ತಿರುವುದು ಸರಿಯಲ್ಲ. ಇಲ್ಲಿ ಗೆದ್ದವನು ಸೋತ. ಸೋತವನು ಸತ್ತ ಹಾಗೆ ಆಗುತ್ತಿದೆ. ಸಮಸ್ಯೆಗಳನ್ನು ಬಗೆಹರಿಸಲು ಮಧ್ಯವರ್ತಿಗಳ ಬಳಿ ಹೋಗುವ ವ್ಯವಸ್ಥೆ ಆಗುತ್ತಿದ್ದು, ಇದರಿಂದ ಸಮಾಜಕ್ಕೆ ಬೇರೆಯ ಸಂದೇಶವೇ ಹೋಗುತ್ತಿದೆ. ದುರಾಸೆ ಬಿಡಬೇಕು, ಸರಳ ಜೀವನ ನಡೆಸಬೇಕು ಎಂದು ಅವರು ತಿಳಿಸಿದರು.

ನನಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಇವುಗಳಿಂದ ಬಂದ ಹಣವನ್ನು ಅನಾಥಾಶ್ರಮ, ಸಂಘ ಸಂಸ್ಥೆಗಳಿಗೆ ಕೊಟ್ಟಿದ್ದೇನೆ. ಯಾರಿಂದಲೂ ಒಂದು ರೂಪಾಯಿ ಪಡೆದಿಲ್ಲ. ನನ್ನ ಹೆಸರಿನಲ್ಲಿ ಒಂದು ಅಪಾರ್ಟ್ ಮೆಂಟ್ ಮಾತ್ರ ಇದೆ. ಬೇರೆ ಆಸ್ತಿ ಇಲ್ಲ. ನಾವು ಯಾವಾಗಲೂ ಶುದ್ಧವಾಗಿರಬೇಕು ಎಂದು ಹೇಳಿದರು.