ಚಾಮರಾಜನಗರ(Chamarajanagar): ನನ್ನ ಕ್ಷೇತ್ರ ಗೋವಿಂದರಾಜನಗರ. 35-40 ಕ್ಷೇತ್ರಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಎಲ್ಲಿ ಸ್ಪರ್ಧಿಸಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಬಿಜೆಪಿ ಸಚಿವರ ಕುರಿತಾಗಿ ಸಿದ್ದರಾಮಯ್ಯ ಅವರು ಆಲಿಬಾಬಾ ಮತ್ತು 40 ಕಳ್ಳರು ಎಂದು ಹೇಳಿರುವುದಕ್ಕೆ ಗುರುವಾರ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೃದಯದಿಂದ ಮಾತನಾಡುತ್ತಿಲ್ಲ. ಕಂಠದಿಂದ ಈಚೆಗೆ ಮಾತನಾಡುತ್ತಿದ್ದಾರೆ ಅವರ ಬಗ್ಗೆ ಗೌರವವಿದೆ. ನಾನು ಮಾತನಾಡುವುದಕ್ಕೆ ಶುರು ಮಾಡಿದರೆ ವಿಚಾರ ಎಲ್ಲೆಲ್ಲೋ ಹೋಗುತ್ತದೆ. ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.
200 ಯುನಿಟ್ ಉಚಿತ ವಿದ್ಯುತ್ ನೀಡುವ ಕಾಂಗ್ರೆಸ್ ಭರವಸೆ ಬಗ್ಗೆ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ಥಾನ ಹಾಗೂ ಇತರ ರಾಜ್ಯಗಳಲ್ಲಿ ಯಾಕೆ ಈ ಯೋಜನೆ ಜಾರಿಗೆ ತಂದಿಲ್ಲ? ರಾಜ್ಯದಲ್ಲಿ ವಿದ್ಯುತ್ ಕಂಪನಿಗಳ ನೌಕರರಿಗೆ ಇದ್ದ ಉಚಿತ ವಿದ್ಯುತ್ ಸೌಲಭ್ಯವನ್ನು ವಾಪಸ್ ಪಡೆದವರು ಯಾರು? 75 ವರ್ಷಗಳ ಅವಧಿಯಲ್ಲಿ ಹೆಚ್ಚು ಕಾಲ ಆಳ್ವಿಕೆ ಮಾಡಿದವರಿಗೆ 5-10 ವರ್ಷಗಳ ಕಾಲ ತಡೆಯುವುದಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.














