ಮನೆ ರಾಜಕೀಯ ಕಾಂಗ್ರೆಸ್ ಡ್ರಾಮಾ ಬಾಜಿ ಕಂಪನಿ: ಸಚಿವ ಪ್ರಲ್ಹಾದ ಜೋಶಿ

ಕಾಂಗ್ರೆಸ್ ಡ್ರಾಮಾ ಬಾಜಿ ಕಂಪನಿ: ಸಚಿವ ಪ್ರಲ್ಹಾದ ಜೋಶಿ

0

ಹುಬ್ಬಳ್ಳಿ: ಕಾಂಗ್ರೆಸ್ ಡ್ರಾಮಾ ಬಾಜಿ ಕಂಪನಿಯಾಗಿದ್ದು, ಅವರನ್ನು ಜನ ಈಗಾಗಲೇ ಬ್ಯಾನ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮತದಾರರಿಗೆ ಹಣದ ಆಮಿಷ ತೋರಿಸುತ್ತಿರುವ ಬಿಜೆಪಿಯನ್ನು ಬ್ಯಾನ್ ಮಾಡಿ ಎನ್ನುವ ಡಿ.ಕೆ.‌ ಶಿವಕುಮಾರ್ ಹೇಳಿಕೆಗೆ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರದ ಬೀಜ ಬಿತ್ತಿ, ತತ್ತಿಯನ್ನಿಟ್ಟು ಕಾವನ್ನು ಕೊಟ್ಟವರು ಕಾಂಗ್ರೆಸ್ ಮುಖಂಡರು. ಅವರಿಂದಲೇ ಭ್ರಷ್ಟಾಚಾರ ಆರಂಭವಾಗಿದ್ದು ಎಂದು ತಿರುಗೇಟು ನೀಡಿದರು.

ರಾಜಕೀಯಕ್ಕೆ ಬರುವ ಪೂರ್ವ ತಮ್ಮ ಆಸ್ತಿ ಎಷ್ಟಿತ್ತು, ಈಗ ಎಷ್ಟಾಗಿದೆ ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಗರಣಗಳ‌ ಸರಮಾಲೆಯೇ ನಡೆಯುತ್ತಿತ್ತು. ಸೋನಿಯಾಗಾಂಧಿ, ಮನಮೋಹನ್ ಸಿಂಗ್ ಸಹ ಹಗರಣದಲ್ಲಿ ಭಾಗಿಯಾಗಿದ್ದರು. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಬಿಜೆಪಿಯನ್ನು ಜನರು ಮೆಚ್ಚಿದ್ದಾರೆ. ಅದನ್ನು ಸಹಿಸದ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ ಎಂದರು.

ಮೋದಿ, ಶಾ ನೂರು ಬಾರಿ ರಾಜ್ಯಕ್ಕೆ ಬಂದರೂ ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್ ಎನ್ನುವ ಸಿದ್ದರಾಮಯ್ಯರ ಹೇಳಿಕೆಗೆ, ಹಿಂದಿನ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲೂ ಅವರು ಹಾಗೆ ಹೇಳಿದ್ದರು. ನಂತರ ಆಗಿದ್ದೇನು? ಚುನಾವಣೆ ಸಮೀಪಿಸುತ್ತಿರುವ ಕಾರಣ, ಏನಾದರೂ ಹೇಳಿ‌ಕೆ ನೀಡಿ ಪ್ರಚಾರದಲ್ಲಿರಬೇಕು ಎಂದು ಅವರು ಹಾಗೆಲ್ಲ ಹೇಳಿಕೆ ನೀಡುತ್ತಾರೆ ಎಂದು ಜೋಶಿ ವ್ಯಂಗ್ಯವಾಡಿದರು.