ಮನೆ ರಾಜಕೀಯ ಕಾಂಗ್ರೆಸ್ ಜನರನ್ನು ಭ್ರಮೆಗೆ ದೂಡುತ್ತಿದೆ: ಅರುಣ್ ಸಿಂಗ್

ಕಾಂಗ್ರೆಸ್ ಜನರನ್ನು ಭ್ರಮೆಗೆ ದೂಡುತ್ತಿದೆ: ಅರುಣ್ ಸಿಂಗ್

0

ಹುಬ್ಬಳ್ಳಿ(Hubballi): ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಜನರನ್ನು ಭ್ರಮೆಗೆ ದೂಡುತ್ತಿರುವ ಕಾಂಗ್ರೆಸ್ ಹತಾಶೆ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನಡುವೆ ಆಂತರಿಕ ಕಲಹ ಬಲವಾಗುತ್ತಿದೆ ಎಂದರು.

ಚುನಾವಣೆಗೆ ಸೂಕ್ತ ವಿಷಯಗಳಿಲ್ಲದೆ ಬಿಜೆಪಿ ನಾಯಕರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ ಅವಮಾನಿಸುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ಕೊಡಲಿದ್ದಾರೆ ಎಂದು  ಹೇಳಿದರು.

ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಯ ಮುಸುಕಿನ ಗುದ್ದಾಟ ಶುರುವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 150 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ತಿಳಿಸಿದರು.

ರಾಜಸ್ಥಾನ, ಛತ್ತೀಸಗಢದಲ್ಲಿ ಚುನಾವಣಾ ವೇಳೆ ನೀಡಿದ ಭರವಸೆಗಳನ್ನೇ ಕಾಂಗ್ರೆಸ್ ಈಡೇರಿಸಿಲ್ಲ. ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ವಾಗ್ದಾನ ಮಾಡಿದ್ದರು. ಅಲ್ಲಿ ಮತ್ತೊಂದು ಅವಧಿಗೆ ಚುನಾವಣೆ ಎದುರಾಗುತ್ತಿದ್ದರೂ ರೈತರ ಸಾಲ ಮನ್ನಾ ಆಗಿಲ್ಲ. ಕಾಂಗ್ರೆಸ್ ಎಂದರೆ ಸುಳ್ಳುಗಳ ಅರಮನೆ ಎಂಬುದಾಗಿದ್ದು, ಇದೀಗ ಕರ್ನಾಟಕದಲ್ಲಿ ಉಚಿತ ಕೊಡುಗೆಗಳ ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿದೆ ಎಂದರು.

ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದೆ. ಪ್ರಧಾನಮಂತ್ರಿ ಗರೀಬ್ ಯೋಜನೆಯಡಿ ಉಚಿತವಾಗಿ ಅಕ್ಕಿ ಕೊಡಲಾಗುತ್ತಿದೆ. 35 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಎಸ್‌’ಸಿ ಮತ್ತು ಎಸ್‌’ಟಿಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದೆ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ ಎಂದು ಹೇಳಿದರು.