ನವದೆಹಲಿ: ಭಾರತವು ಜಗತ್ತಿಗೇ ಪರಿಹಾರಗಳನ್ನು ನೀಡುವಷ್ಟು ಸಶಕ್ತವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಅಧಿವೇಶನ ಆರಂಭವಾಗಿದ್ದು, ಅವರು ಜಂಟಿ ಸದನವನ್ನುದ್ದೇಶಿ ಭಾಷಣ ಮಾಡಿದರು.
2047 ರ ವೇಳೆಗೆ ನಾವು ಗತಕಾಲದ ಬುನಾದಿಯ ಮೇಲೆ ಆಧುನಿಕತೆಯ ಸುವರ್ಣ ಅಧ್ಯಾಯಗಳನ್ನು ಹೊಂದಿರುವ ಸಶಕ್ತ ರಾಷ್ಟ್ರವನ್ನಾಗಿ ನಿರ್ಮಿಸಬೇಕಾಗಿದೆ. ಆತ್ಮನಿರ್ಭರ್ ಮತ್ತು ಮಾನವೀಯ ನೆಲೆಯ ಮೇಲೆ ಸಮರ್ಥ ದೇಶವನ್ನು ಕಟ್ಟಬೇಕು ಹೇಳಿದರು.
ಬಡವರು, ಮಧ್ಯಮ ವರ್ಗ, ಯುವಕರು, ಮಹಿಳೆಯರೆನ್ನದೇ ಎಲ್ಲ ಸ್ತರದ ನಾಗರಿಕರು ಅಭಿವೃದ್ಧಿ ಹೊಂದಬೇಕು. ಯುವಕರು ಮತ್ತು ಮಹಿಳೆಯರು ಸಮಾಜಕ್ಕೆ ಮತ್ತು ದೇಶಕ್ಕೆ ದಾರಿ ತೋರಿಸುವ ಮುಂಚೂಣಿಯಲ್ಲಿರಬೇಕು. ಯುವಕರು ಅಭಿವೃದ್ಧಿಯ ವಿಷಯದಲ್ಲಿ ಎಲ್ಲರಿಗಿಂತಲೂ ಎರಡು ಹೆಜ್ಜೆ ಮುಂದೆ ಇರಬೇಕು ಎಂದು ಹೇಳಿದರು.
ಇಂದು, ದೇಶದಲ್ಲಿ ಸ್ಥಿರ, ನಿರ್ಭೀತ ಮತ್ತು ನಿರ್ಣಾಯಕ ಸರ್ಕಾರವಿದೆ. ಅದು ದೊಡ್ಡ ಕನಸುಗಳನ್ನು ನನಸಾಗಿಸಲು ಕೆಲಸ ಮಾಡುತ್ತಿದೆ. ದೇಶದ ಆತ್ಮಸ್ಥೈರ್ಯ ಅತ್ಯುನ್ನತ ಮಟ್ಟದಲ್ಲಿದೆ. ಜಗತ್ತು ನಮ್ಮನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದೆ ಎಂದರು.