ಮನೆ ರಾಷ್ಟ್ರೀಯ ಭಾರತದ ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ಸಚಿವೆ ನಿರ್ಮಲಾ ಸೀತರಾಮನ್ : ಶೇ 6.5 ಜಿಡಿಪಿ...

ಭಾರತದ ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ಸಚಿವೆ ನಿರ್ಮಲಾ ಸೀತರಾಮನ್ : ಶೇ 6.5 ಜಿಡಿಪಿ ಬೆಳವಣಿಗೆ ಅಂದಾಜು

0

ನವದೆಹಲಿ: ಭಾರತದ ಆರ್ಥಿಕ ಸಮೀಕ್ಷೆ ವರದಿ 2022-23ನ್ನು ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

ಈ ವರ್ಷದ ಶೇಕಡ 7ರಷ್ಟು ಬೆಳವಣಿಗೆ ದರಕ್ಕೆ ಹೋಲಿಸಿದರೆ, ಭಾರತದ ಆರ್ಥಿಕತೆಯು 2023–24ರ ಆರ್ಥಿಕ ವರ್ಷದಲ್ಲಿ ಶೇ. 6.5ರಷ್ಟು ಬೆಳವಣಿಗೆಯಾಗಲಿದೆ. 2021–22ರಲ್ಲಿ ಈ ದರ ಶೇಕಡ 8.7ರಷ್ಟಿತ್ತು. ಭಾರತವು ಈಗಲೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಸಚಿವೆ ಹೇಳಿದ್ದಾರೆ.

ಭಾರತವು ಪಿಪಿಪಿ(ಖರೀದಿ ಸಾಮರ್ಥ್ಯದ ಅನುರೂಪತೆ) ನಿಯಮಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ, ವಿನಿಮಯ ದರದ ವಿಷಯದಲ್ಲಿ ಐದನೇ ದೊಡ್ಡ ಆರ್ಥಿಕತೆಯಾಗಿದೆ.

ಕೋವಿಡ್ ಸಂಕಷ್ಟ ಮತ್ತು ಯೂರೋಪಿನ ಬಿಕ್ಕಟ್ಟಿನಿಂದಾಗಿ ಕುಸಿದಿದ್ದ ಆರ್ಥಿಕತೆಯು ಬಹುತೇಕ ಮತ್ತೆ ಹಳಿಗೆ ಮರಳಿದೆ.

ಜಾಗತಿಕ ಆರ್ಥಿಕ, ರಾಜಕೀಯ ಬೆಳವಣಿಗೆಗಳನ್ನು ಅವಲಂಬಿಸಿ ಮುಂದಿನ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇಕಡ 6-6.8 ವ್ಯಾಪ್ತಿಯಲ್ಲಿರುತ್ತದೆ.

ಕೋವಿಡ್ ನಂತರದ ಭಾರತದ ಚೇತರಿಕೆಯು ಅತ್ಯಂತ ವೇಗವಾಗಿದ್ದು, ಮುಂದಿನ ಆರ್ಥಿಕ ಬೆಳವಣಿಗೆಯು ದೇಶೀಯ ಬೇಡಿಕೆಯ ಮೇಲೆ ಆಧಾರಿತವಾಗಿದೆ.

ಆರ್‌ಬಿಐ ಈ ಹಣಕಾಸು ವರ್ಷದಲ್ಲಿ ಶೇಕಡ 6.8ರಷ್ಟು ಹಣದುಬ್ಬರವನ್ನು ಅಂದಾಜು ಮಾಡಿದೆ.

ಅಮೆರಿಕದ ಫೆಡರಲ್ ಬ್ಯಾಂಕ್ ಮತ್ತಷ್ಟು ಬಡ್ಡಿ ದರ ಹೆಚ್ಚಳದ ಸಾಧ್ಯತೆ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತದ ಸವಾಲು ಮುಂದುವರಿದಿದೆ.