ಅಮರಾವತಿ: ವಿಶಾಖಪಟ್ಟಣ ನಗರವು ಆಂಧ್ರಪ್ರದೇಶದ ನೂತನ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಂಗಳವಾರ ತಿಳಿಸಿದರು.
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಜಗನ್, ಹೊಸ ರಾಜಧಾನಿ ಕುರಿತು ಫೋಷಿಸಿ, ಮುಂದಿನ ದಿನಗಳಲ್ಲಿ ವಿಶಾಖಪಟ್ಟಣದಿಂದ ರಾಜ್ಯದ ಆಡಳಿತವನ್ನು ಪ್ರಾರಂಭಿಸುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಕೆಲವೇ ದಿನಗಳಲ್ಲಿ ನಾನು ಕೂಡ ವಿಶಾಖಪಟ್ಟಣಕ್ಕೆ ಸ್ಥಳಾಂತರವಾಗುತ್ತೇನೆ. ಜತೆಗೆ, ವಿಶಾಖಪಟ್ಟಣದಲ್ಲೇ ಮಾರ್ಚ್ 3, 4ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸಲಾಗುವುದು ಎಂದು ಜಗನ್ ವಿವರಿಸಿದರು.
ಸದ್ಯ ಅಮರಾವತಿ ಆಂಧ್ರಪ್ರದೇಶದ ರಾಜಧಾನಿಯಾಗಿದೆ. ಗುಂಟೂರು ಜಿಲ್ಲೆಯ ಭಾಗವಾಗಿದ್ದ ಅಮರಾವತಿಯಲ್ಲಿ ಶಾಸಕಾಂಗ ಕಾರ್ಯನಿರ್ವಹಿಸುವುದು ಮುಂದುವರಿಯುತ್ತದೆ.