ಮನೆ ರಾಜ್ಯ ಅಮೃತ ಸರೋವರ ಕೆರೆ ಅಂಗಳದಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಅಮೃತ ಸರೋವರ ಕೆರೆ ಅಂಗಳದಲ್ಲಿ ಗಣರಾಜ್ಯೋತ್ಸವ ಸಂಭ್ರಮ

0

ಪಿರಿಯಾಪಟ್ಟಣ: ಅಮೃತ ಸರೋವರ ಕೆರೆ ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸುವ ಮೂಲಕ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಬೆಟ್ಟದತುಂಗ ಗ್ರಾ.ಪಂ ಅಧ್ಯಕ್ಷ ಎನ್.ಎಸ್.ದೇವರಾಜು ಹೇಳಿದರು.

ತಾಲ್ಲೂಕಿನ ಬೆಟ್ಟದತುಂಗ ಗ್ರಾ.ಪಂ ವ್ಯಾಪ್ತಿಯ ಕುಡುಕೂರು ಗ್ರಾಮದ ಹೊಸಕೆರೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಮೃತ ಸರೋವರದಡಿಯಲ್ಲಿ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿರುವುದು ಸಂತೋಷದ ವಿಷಯ ಎಂದರು.

ಗಣರಾಜ್ಯೋತ್ಸವವನ್ನು ಅಮೃತ ಸರೋವರ ಕೆರೆ ದಡದಲ್ಲಿ ಆಯೋಜಿಸುವ ಮೂಲಕ ರೈತರಿಗೆ ಜಲಮೂಲಗಳನ್ನು ಸಂರಕ್ಷಿಸಿಕೊಳ್ಳುವ ಸಂಬಂಧ ಅರಿವು ಮೂಡಿಸಲು ಸಹಕಾರಿಯಾಗಿದೆ. ಗ್ರಾಮಸ್ಥರು ಹಾಗೂ ರೈತರು ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದು ಹೇಳಿದರು.

ಬೆಟ್ಟದತುಂಗ ಗ್ರಾ.ಪಂ ಕುಡುಕೂರು ಗ್ರಾಮದ ಹೊಸಕೆರೆ, ಪೂನಾಡಹಳ್ಳಿ ಅಕ್ಕೆಕಟ್ಟೆ, ಹರದೂರು ಗ್ರಾ.ಪಂನ ಆನಿವಾಳು ಗ್ರಾಮದ ಬಿದಿರುಕಟ್ಟೆ ಒಟ್ಟು ೩ ಅಮೃತ ಸರೋವರ ಕೆರೆ ಅಂಗಳದಲ್ಲಿ ಜಲ ಸಂರಕ್ಷಣೆ ಮಹತ್ವವನ್ನು ಸಾರುವಂತೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಬಳಿಕ ಅಮೃತ ಸರೋವರ ಕೆರೆ ಆವರಣದ ಸುತ್ತ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಮಹಿಳೆಯರು ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.