ಬೇಕಾಗುವ ಸಾಮಗ್ರಿ
ಸಣ್ಣ ರವೆ 1ಕಪ್, ಬೆಲ್ಲ 1 ಕಪ್, ಹಾಲು ಅರ್ಧ ಕಪ್, ಮೊಸರು ಕಾಲು ಕಪ್, ಅರ್ಧ ಕಪ್ ಅಡುಗೆ ಎಣ್ಣೆ, ಅಡುಗೆ ಸೋಡಾ ಒಂದು ಚಮಚ, ಸಣ್ಣಗೆ ಕತ್ತರಿಸಿದ ಒಣ ಹಣ್ಣುಗಳು (ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಇತ್ಯಾದಿ) ಕಾಲು ಕಪ್.
ಮಾಡುವ ವಿಧಾನ:
ರವೆ, ಬೆಲ್ಲ, ಹಾಲು, ಮೊಸರು, ಅಡುಗೆ ಎಣ್ಣೆ, ಅಡುಗೆ ಸೋಡಾ ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿಕೊಂಡು, ಆ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ. ಒಣಹಣ್ಣುಗಳಲ್ಲಿ ಅರ್ಧದಷ್ಟನ್ನು ಈ ಮಿಶ್ರಣಕ್ಕೆ ಸೇರಿಸಿ, ತಟ್ಟೆ ಮುಚ್ಚಿಡಿ. ಒಲೆಯ ಮೇಲೆ ದಪ್ಪ ಕಡಾಯಿ ಇಟ್ಟು ಕೇಕ್ ಸ್ಟಾಂಡ್ ಅಥವಾ ಕುಕಿಂಗ್ ಪಾಟ್ ಸ್ಟಾಂಡ್ ಇಟ್ಟು ಕಡಾಯಿ ಮುಚ್ಚಿ. ಸಣ್ಣ ಉರಿಯಲ್ಲಿ ಪ್ರೀ ಹೀಟ್ ಮಾಡಿ.
ನಂತರ ಕೇಕ್ ಪ್ಯಾನ್ ಒಳಗೆ ಎಣ್ಣೆ ಸವರಿ ಬಟರ್ ಪೇಪರ್ ಇಟ್ಟು ಸ್ವಲ್ಪ ಜಿಡ್ಡು ಕಾಣಿಸಿ. ನಂತರ ಕೇಕ್ ಮಿಶ್ರಣವನ್ನು ಸುರಿದು, ಸಮವಾಗಿ ಹರಡಿಸಿ ಕಡಾಯಿಯಲ್ಲಿಟ್ಟು ಸಣ್ಣ ಉರಿಯಲ್ಲೇ ಬೇಯಲು ಬಿಡಿ. 20 ರಿಂದ 25 ನಿಮಿಷಗಳ ನಂತರ ಉಳಿದ ಒಣ ಹಣ್ಣುಗಳನ್ನು ಕೇಕ್ ಮೇಲೆ ಹರಡಿ. 15 ರಿಂದ 20 ನಿಮಿಷ ಅದೇ ಉರಿಯಲ್ಲಿ ಬೇಯಿಸಿ. ಫ್ರೂಟ್ ಪಿಕ್‌ನಲ್ಲಿ ಕೇಕಿನೊಳಗೆ ಚುಚ್ಚಿ ತೆಗೆದರೆ ಮಿಶ್ರಣ ಅಂಟುವುದಿಲ್ಲ ಎಂದರೆ ಕೇಕ್ ಸಿದ್ಧವಾಗಿದೆ ಎಂದು ಅರ್ಥ.
ಸ್ಟವ್ ಆರಿಸಿ. ಕೇಕ್ ಪಾನ್ ಕೆಳಗಿರಿಸಿ. ತಣ್ಣಗಾದ ನಂತರ ಕತ್ತರಿಸಿ ಸವಿಯಬಹುದು.