ಮನೆ ರಾಷ್ಟ್ರೀಯ ದೂರದೃಷ್ಟಿ ಇಲ್ಲದ ಬಜೆಟ್‌: ಮಲ್ಲಿಕಾರ್ಜುನ ಖರ್ಗೆ ಟೀಕೆ

ದೂರದೃಷ್ಟಿ ಇಲ್ಲದ ಬಜೆಟ್‌: ಮಲ್ಲಿಕಾರ್ಜುನ ಖರ್ಗೆ ಟೀಕೆ

0

ನವದೆಹಲಿ: ಇದು ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡನೆ ಮಾಡಿರುವ ಬಜೆಟ್ ಇದಾಗಿದ್ದು, ದೇಶವನ್ನು ಗಮನದಲ್ಲಿರಿಸಿಕೊಂಡಿಲ್ಲ. ಮುಖ್ಯವಾಗಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇದು ದೂರದೃಷ್ಟಿ ಇಲ್ಲದ ಬಜೆಟ್‌ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಕೇಂದ್ರ ಬಜೆಟ್‌ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಮೇಲಿನ ಜನರ ನಂಬಿಕೆ ನಿರಂತರವಾಗಿ ಕುಸಿಯುತ್ತಿದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂಡಿಸಿರುವ ಇಂದಿನ ಬಜೆಟ್ ಸಾಕ್ಷಿಯಾಗಿದೆ ವಾಗ್ದಾಳಿ ನಡೆಸಿದ್ದಾರೆ.

ಹಣದುಬ್ಬರ ಹಾಗೂ ದೈನಂದಿನ ವಸ್ತುಗಳ ಬೆಲೆ ಕಡಿಮೆ ಮಾಡುವ ಯಾವುದೇ ಅಂಶ ಬಜೆಟ್‌ನಲ್ಲಿಲ್ಲ. ಬೇಳೆಕಾಳು, ಹಾಲು, ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವ ಮೋದಿ ಸರ್ಕಾರ ದೇಶವನ್ನು ಲೂಟಿ ಮಾಡಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನರೇಗಾ ಯೋಜನೆಗೆ ₹38,468 ಕೋಟಿ ಅನುದಾನವನ್ನು ಕಡಿತಗೊಳಿಸಲಾಗಿದೆ. ಹಾಗಾದರೆ ಬಡವರ ಪಾಡೇನು? ಎಂದು ಪ್ರಶ್ನಿಸಿದ ಖರ್ಗೆ, ಬಜೆಟ್‌’ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಯಾವುದೇ ಉತ್ತೇಜನ ನೀಡಿಲ್ಲ ಎಂದಿದ್ದಾರೆ.

ರೈತ ವಿರೋಧಿ ಮೋದಿ ಸರಕಾರ ರೈತರಿಗಾಗಿ ಬಜೆಟ್‌’ನಲ್ಲಿ ಏನನ್ನೂ ನೀಡಿಲ್ಲ. 2022ರಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಅದನ್ನು ಏಕೆ ಈಡೇರಿಸಲಿಲ್ಲ? ಕನಿಷ್ಠ ಬೆಂಬಲ ಬೆಲೆ (ಎಂಎಸ್‌’ಪಿ) ಖಾತ್ರಿ ಎಲ್ಲಿದೆ? ರೈತರ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಕಿಡಿಕಾರಿದ್ದಾರೆ.

ಮೋದಿ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರವನ್ನು ಹಾಳು ಮಾಡಿದೆ. ಕೆಲವು ಉದ್ಯಮಿಗಳು ಲೂಟಿ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲ (ಎನ್‌ಪಿಎ) 36 ಲಕ್ಷ ಕೋಟಿಯಷ್ಟಿದೆ. ಆದರೆ ಬಜೆಟ್‌ನಲ್ಲಿ ಯಾವುದೇ ಪರಿಹಾರವನ್ನು ಪ್ರಸ್ತಾಪಿಸಿಲ್ಲ ಎಂದು ಖರ್ಗೆ ಗುಡುಗಿದ್ದಾರೆ.

ಒಟ್ಟಾರೆ, ಮೋದಿ ಸರ್ಕಾರ ಅವಧಿಯಲ್ಲಿ ಜನರ ಬದುಕು ದುಸ್ತರವಾಗಿದೆ. ದೇಶದ ಆರ್ಥಿಕತೆಗೆ ತೀವ್ರ ಪೆಟ್ಟು ಬಿದ್ದಿದೆ. ದೇಶದ ಸಂಪತ್ತನ್ನು ಲೂಟಿ ಮಾಡಿದ್ದು ಬಿಟ್ಟರೆ ಮೋದಿ ಸರ್ಕಾರ ಏನೂ ಮಾಡಿಲ್ಲ. ಈ ಬಜೆಟ್ ಅನ್ನು ‘ದೂರದೃಷ್ಟಿ ಇಲ್ಲದ ಹೆಸರಿಗಷ್ಟೇ ದೊಡ್ಡ ಬಜೆಟ್’ ಎಂದು ಕರೆಯಬಹುದು ಎಂದಿದ್ದಾರೆ.